ಹಿಂದೂ ವಿರೋಧಿ ಹೇಳಿಕೆ: ಕೇಜ್ರಿವಾಲ್ ಸಂಪುಟ ಸಚಿವ ರಾಜೇಂದ್ರ ಗೌತಮ್ ರಾಜೀನಾಮೆ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೇಂದ್ರ ಪಾಲ್ ಗೌತಮ್
ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ನಾನು ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಇದಾದ ಬಳಿಕ ಬಿಜೆಪಿ ಮತ್ತು ಎಎಪಿ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿದ್ದವು. ಇನ್ನು ಬಿಜೆಪಿ ಸಹ ರಾಜೇಂದ್ರ ಪಾಲ್ ರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿತ್ತು.

ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಮಹರ್ಷಿ ವಾಲ್ಮೀಕಿ ಅವರ ದ್ಯೋತಕ ದಿನ. ಮತ್ತೊಂದೆಡೆ ಇದು ಮಾನ್ಯವರ್ ಕಾನ್ಶಿ ರಾಮ್ ಸಾಹೇಬ್ ಅವರ ಪುಣ್ಯತಿಥಿ. ಇದು ಕಾಕತಾಳೀಯವೋ ಏನು. ಇಂದು ನಾನು ಅನೇಕ ಸಂಕೋಲೆಗಳಿಂದ ಬಿಡುಗಡೆ ಹೊಂದಿದ್ದೇನೆ. ಇಂದು ನಾನು ಮತ್ತೆ ಹುಟ್ಟಿದ್ದೇನೆ. ಈಗ ನಾನು ಯಾವುದೇ ನಿರ್ಬಂಧವಿಲ್ಲದೆ ಹೆಚ್ಚು ದೃಢವಾಗಿ ಸಮಾಜದ ಮೇಲಿನ ಹಕ್ಕುಗಳು ಮತ್ತು ದೌರ್ಜನ್ಯಗಳ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಟ್ವೀಟಿಸಿದ್ದಾರೆ. 

ರಾಜೇಂದ್ರ ಪಾಲ್ ಗೌತಮ್ ಅವರು ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆ ನಂತರ ಸಾಕಷ್ಟು ವಾಗ್ವಾದ ನಡೆಯಿತು. ಆಮ್ ಆದ್ಮಿ ಪಕ್ಷವು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಆರೋಪಿಸಿತ್ತು. ಇನ್ನು ರಾಜೇಂದ್ರ ಗೌತಮ್ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ತೀವ್ರ ಆಕ್ರೋಶ ಹೊರಹಾಕಿದ್ದರು ಎನ್ನಲಾಗಿದೆ. 

ಆಪ್ ವಿರುದ್ಧ ಬಿಜೆಪಿ ವಾಗ್ದಾಳಿ
ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಹೇಳುವ ಕೇಜ್ರಿವಾಲ್ 24 ಗಂಟೆಯೊಳಗೆ ಗೌತಮ್ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಕೇಜ್ರಿವಾಲ್ ಗೆ ಎಚ್ಚರಿಕೆ ನೀಡಿತ್ತು. ಗೌತಮ್ ಅವರ ರಕ್ಷಣೆ ಕಾಲ್ಪನಿಕವಾಗಿದೆ. ಹಿಂದೂ ಧರ್ಮವನ್ನು ಅವಮಾನಿಸುವ ಹಕ್ಕನ್ನು ಯಾವ ಧರ್ಮವೂ ನೀಡುವುದಿಲ್ಲ. ಕೇಜ್ರಿವಾಲ್ ಅವರ ಸಚಿವರು ಹೇಳಿದ ಮಾತು ಸಂವಿಧಾನ ವಿರೋಧಿ ಮಾತ್ರವಲ್ಲ, ಸಮಾಜದ ಸಾಮರಸ್ಯಕ್ಕೆ ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿತ್ತು.

ರಾಮ-ಕೃಷ್ಣರನ್ನು ದೇವರೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ
ಬಿಜೆಪಿ ನಾಯಕರು ಹಂಚಿಕೊಂಡಿರುವ ವೀಡಿಯೊದಲ್ಲಿ ವಿಜಯದಶಮಿ ದಿನದಂದು ದೆಹಲಿಯ ಕರೋಲ್‌ಬಾಗ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಬೌದ್ಧ ಸಂತರು ಜನರಿಗೆ ಪ್ರಮಾಣ ವಚನ ಬೋಧಿಸುತ್ತಿರುವುದು ಕಾಣಬಹುದು. ಪ್ರಮಾಣವಚನದ ಸಮಯದಲ್ಲಿ, ರಾಜೇಂದ್ರ ಪಾಲ್ ಗೌತಮ್ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ಘೋಷಣೆ ವೇಳೆ ನಾನು ಎಂದಿಗೂ ಬ್ರಹ್ಮ, ವಿಷ್ಣು, ಮಹೇಶರನ್ನು ದೇವರೆಂದು ಪರಿಗಣಿಸುವುದಿಲ್ಲ. ರಾಮ ಮತ್ತು ಕೃಷ್ಣನನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಅವರನ್ನು ಎಂದಿಗೂ ಪೂಜಿಸುವುದಿಲ್ಲ. ನಾನು ಗೌರಿ ಗಣೇಶ ಇತ್ಯಾದಿ ಹಿಂದೂ ಧರ್ಮದ ಯಾವುದೇ ದೇವತೆಗಳನ್ನು ನಂಬುವುದಿಲ್ಲ ಅಥವಾ ಪೂಜಿಸುವುದಿಲ್ಲ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com