ಬಗ್ಗದ ಗಂಗೂಲಿ- ತಗ್ಗದ ಬಿಜೆಪಿ: ರಾಜಕೀಯ ಪ್ರವೇಶಕ್ಕೆ 'ದಾದಾ' ನಿರಾಕರಣೆ; ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕಡೆಗಣನೆ!

ಸೌರವ್ ಗಂಗೂಲಿ, ಬಂಗಾಳಿಯರ ಪ್ರೀತಿಯ 'ದಾದಾ' ಸುದ್ದಿಯಲ್ಲಿದ್ದಾರೆ. ಅದು ಕ್ರಿಕೆಟ್ ನಿಂದಾಚೆಗೆ ರಾಜಕೀಯಕ್ಕೆ ಹೊರಳಿರುವುದು ಈಗಿನ ಸುದ್ದಿ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿಯವರ ಬಿಸಿಸಿಐ ಅಧ್ಯಕ್ಷ ಪಟ್ಟ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಬಿಟ್ಟು ರಾಜಕೀಯ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. 
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಸೌರವ್ ಗಂಗೂಲಿ, ಬಂಗಾಳಿಯರ ಪ್ರೀತಿಯ 'ದಾದಾ' ಸುದ್ದಿಯಲ್ಲಿದ್ದಾರೆ. ಅದು ಕ್ರಿಕೆಟ್ ನಿಂದಾಚೆಗೆ ರಾಜಕೀಯಕ್ಕೆ ಹೊರಳಿರುವುದು ಈಗಿನ ಸುದ್ದಿ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿಯವರ ಬಿಸಿಸಿಐ ಅಧ್ಯಕ್ಷ ಪಟ್ಟ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಬಿಟ್ಟು ರಾಜಕೀಯ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. 

ಸೌರವ್ ಗಂಗೂಲಿಯವರ ಸ್ಥಾನಕ್ಕೆ 1983ರ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಸದಸ್ಯ ರೋಜರ್ ಬಿನ್ನಿಯವರನ್ನು ತಂದು ಕೂರಿಸುತ್ತಿದ್ದು ಈಗಾಗಲೇ ಘೋಷಣೆ ಮಾಡಿದೆ. ಇದೇ 18ರಂದು ಮುಂಬೈಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧಿಕೃತ ಮುದ್ರೆ ಒತ್ತಿ ಅಧಿಕಾರ ಹಸ್ತಾಂತರವಾಗಲಿದೆ. 

ವಾಸ್ತವವಾಗಿ ಮುಂದಿನ ಅವಧಿಗೂ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ತೀವ್ರ ಬಯಕೆಯಲ್ಲಿ ಕೋಲ್ಕತ್ತಾ ಪ್ರಿನ್ಸ್ ಇದ್ದರು. ಆದರೆ ಅವರಿಗೆ ಹಲವರ ಬೆಂಬಲವೇ ಸಿಗಲಿಲ್ಲ. ಇದಕ್ಕೆ ಮುಖ್ಯ ಕಾರಣ ದಾದಾ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯದಿದ್ದುದೇ ಎಂಬ ಮಾತುಗಳು ದಟ್ಟವಾಗಿ ಹರಿದಾಡುತ್ತಿದೆ. 

ಪಶ್ಚಿಮ ಬಂಗಾಳ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲು ತೀವ್ರ ಪ್ರಯತ್ನ: ಕಳೆದ ವರ್ಷ ಅಂದರೆ 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಗೆದ್ದು ಬೀಗಿದ್ದು ಈಗ ಇತಿಹಾಸ. ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಧಾನಿ ಮೋದಿ, ಅಮಿತ್ ಶಾ ಬಿರುಸಿನಿಂದ ಪ್ರಚಾರ ನಡೆಸಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು.

ಪಶ್ಚಿಮ ಬಂಗಾಳದ ಜನರ ಪ್ರೀತಿ, ವಿಶ್ವಾಸ ಹೊಂದಿರುವ ಸೌರವ್ ಗಂಗೂಲಿಯವರನ್ನು ಬಿಜೆಪಿಗೆ ಕರೆತರಬೇಕೆಂಬ ಪ್ರಯತ್ನ ಬಿಜೆಪಿಯಲ್ಲಿ ಸಾಕಷ್ಟು ನಡೆದಿತ್ತು.

ಅಷ್ಟೇ ಏಕೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕೂಡ ಸಾಕಷ್ಟು ಪ್ರಯತ್ನ ತೆರೆಮರೆಯಲ್ಲೇ ಬಿಜೆಪಿಯೊಳಗೆ ನಡೆದಿತ್ತಂತೆ. ಆದರೆ ದಾದಾ ಅದನ್ನು ನಯವಾಗಿ ನಿರಾಕರಿಸಿದ್ದರು. ಬಿಲ್ ಕುಲ್ ರಾಜಕೀಯಕ್ಕೆ ಬರುವುದಿಲ್ಲ ಎಂದುಬಿಟ್ಟರು. ಅಷ್ಟಕ್ಕೂ 2019ರಲ್ಲಿ ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್ ಅವರನ್ನು ನೇಮಿಸಿದ್ದರ ಹಿಂದೆ ಬಿಜೆಪಿಯ ಪಾತ್ರವೇ ಇತ್ತಂತೆ. ಆದರೆ ಬಿಜೆಪಿ ಹೈಕಮಾಂಡ್ ತಾಳಕ್ಕೆ ದಾದಾ ಕುಣಿಯಲಿಲ್ಲ. ಪರಿಣಾಮ ಇಂದು ಬಿಸಿಸಿಐ ಅಧ್ಯಕ್ಷ ಪಟ್ಟ ಬೇರೆಯವರ ಪಾಲಾಗುತ್ತಿದೆ. ಅವರಿಗೆ ಬೆಂಬಲ ಇಲ್ಲದಂತಾಗಿದೆ.

ಕಳೆದ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಗಿದ ನಂತರವೂ ಕೊನೆಯ ಪ್ರಯತ್ನ ಎಂಬಂತೆ ಗೃಹ ಸಚಿವ ಅಮಿತ್ ಶಾ ಅವರು ಕೋಲ್ಕತ್ತಾದಲ್ಲಿರುವ ಗಂಗೂಲಿ ಮನೆಗೆ ಭೇಟಿ ನೀಡಿದ್ದರು. ಕಳೆದ ಮೇ ತಿಂಗಳಲ್ಲಿ ಅವರ ಕುಟುಂಬದವರ ಜೊತೆ ಡಿನ್ನರ್ ಮಾಡಿ ಬಂದಿದ್ದರು. ಗಂಗೂಲಿಯವರನ್ನು ರಾಜಕೀಯಕ್ಕೆ ಕರೆತರಲು ಮನವೊಲಿಕೆಗೆ ಅವರ ಕೊನೆಯ ಪ್ರಯತ್ನವಾಗಿತ್ತು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ನೀಡಬೇಕು, ಪ್ರಚಾರ ಮಾಡಬೇಕೆಂಬ ಬೇಡಿಕೆಯನ್ನು ದಾದಾ ಒಪ್ಪದಿದ್ದದ್ದೇ ಅವರ ಮುಂದಿನ ಅವಧಿಯ ಬಿಸಿಸಿಐ ಅಧ್ಯಕ್ಷ ಪಟ್ಟದ ಬಾಗಿಲನ್ನು ಮುಚ್ಚಿದೆ.

ಬಿಸಿಸಿಐಯಲ್ಲಿನ ಈ ಬೆಳವಣಿಗೆ ಕುರಿತಂತೆ ತೃಣಮೂಲ ಕಾಂಗ್ರೆಸ್ ತಕ್ಷಣವೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅದರ ವಕ್ತಾರ ಕುನಲ್ ಘೋಷ್, ಪಕ್ಷಕ್ಕೆ ಸೇರದಿದ್ದುದಕ್ಕೆ ಬಿಜೆಪಿ ದಾದಾಗೆ ಅವಮಾನ ಮಾಡಲು ನೋಡುತ್ತಿದೆ ಎಂದಿದ್ದಾರೆ. ಇನ್ನು ಟಿಎಂಸಿ ರಾಜ್ಯಸಭಾ ಸದಸ್ಯ ಎಂಪಿ ಸಂತನು ಸೇನ್, ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾಗೆ ಬಿಸಿಸಿಐಯಲ್ಲಿ ಎರಡನೇ ಅವಧಿಗೆ ಅವಕಾಶ ಸಿಕ್ಕಿರುವಾಗ ಗಂಗೂಲಿಗೆ ಏಕೆ ಕೊಡಲಿಲ್ಲ ಎಂದು ಕೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಎರಡನೇ ಅವಧಿಗೆ ಮುಂದುವರಿಯಲು ಇಚ್ಛೆ ಹೊಂದಿದ್ದ ಸೌರವ್ ಗಂಗೂಲಿಯವರಿಗೆ ಐಪಿಎಲ್ ಅಧ್ಯಕ್ಷ ಸ್ಥಾನದ ಅವಕಾಶವನ್ನು ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು. ಬಿಸಿಸಿಐಯ ಉನ್ನತ ಅಧಿಕಾರಿಗಳ ಹುದ್ದೆಗೆ ಮರು ಚುನಾವಣೆ ಮಾಡುವುದನ್ನು ತೆರವುಗೊಳಿಸಿದ ನಂತರ ಮತ್ತೊಂದು ಅವಕಾಶ ಸಿಗಬಹುದೆಂದು ಗಂಗೂಲಿ ಆಶಾವಾದ ಹೊಂದಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ಸಿಕ್ಕಿದ ನಂತರ ತಮ್ಮನ್ನು ಬಳಸಿಕೊಂಡು ಬಿಸಾಕಲಾಗಿದೆ ಎಂದು ಗಂಗೂಲಿ ತೀವ್ರ ನೊಂದಿದ್ದಾರೆ ಎಂದು ಆಪ್ತ ಮೂಲಗಳು ಹೇಳುತ್ತವೆ.

ಇಲ್ಲಿ ಆಸಕ್ತಿಕರ ವಿಚಾರವೆಂದರೆ ಸೌರವ್ ಗಂಗೂಲಿಯನ್ನು ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದೀಗ ರೋಜರ್ ಬಿನ್ನಿಯವರನ್ನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೊದಲು ಬಿಸಿಸಿಐ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com