ಉಪ ಚುನಾವಣೆ: ಉದ್ಧವ್ ಬಣದ ಅಭ್ಯರ್ಥಿಯ ರಾಜೀನಾಮೆ ಅಂಗೀಕರಿಸಿ - ಬಿಎಂಸಿಗೆ ಹೈಕೋರ್ಟ್ ಆದೇಶ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಅಭ್ಯರ್ಥಿಯಾಗಿ ಅಂಧೇರಿ(ಪೂರ್ವ) ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸರ್ಕಾರಿ ಕೆಲಸಕ್ಕೆ ರುತುಜಾ ಲಟ್ಕೆ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಬೃಹನ್...
ರುತುಜಾ ಲಟ್ಕೆ
ರುತುಜಾ ಲಟ್ಕೆ

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಅಭ್ಯರ್ಥಿಯಾಗಿ ಅಂಧೇರಿ(ಪೂರ್ವ) ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸರ್ಕಾರಿ ಕೆಲಸಕ್ಕೆ ರುತುಜಾ ಲಟ್ಕೆ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಬಾಂಬೆ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ನಾಮಪತ್ರ ಸಲ್ಲಿಸಲು ಅಕ್ಟೋಬರ್ 14 ಕೊನೆಯ ದಿನವಾಗಿದೆ.

2006 ರಿಂದ ಬಿಎಂಸಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಲಟ್ಕೆ ಅವರು ಅಕ್ಟೋಬರ್ 2 ರಂದು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಬಿಎಂಸಿ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

ಹೀಗಾಗಿ ಬಿಎಂಸಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಲಟ್ಕೆ ಅವರು, ತಾನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಬಿಎಂಸಿ ಉದ್ದೇಶಪೂರ್ವಕವಾಗಿ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಲಟ್ಕೆ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಬಿಎಂಸಿ ಕಮಿಷನರ್ ಅವರ ವಿವೇಚನೆ ಬಳಕೆ ಅಥವಾ ಬಳಕೆಯಾಗದಿರುವುದು "ನಿರಂಕುಶ ಮತ್ತು ದುರುದ್ದೇಶಪೂರಿತವಾಗಿದೆ(ಕೆಟ್ಟ ನಂಬಿಕೆಯಿಂದ ಮಾಡಲಾಗಿದೆ)" ಎಂದು ಹೇಳಿದೆ.

"ಮುನ್ಸಿಪಲ್ ಕಮಿಷನರ್ ರಾಜೀನಾಮೆಯನ್ನು ಅಂಗೀಕರಿಸುವ ಮತ್ತು ನೋಟಿಸ್ ಅವಧಿಯನ್ನು ಕೈಬಿಡುವ ವಿವೇಚನಾ ಅಧಿಕಾರವನ್ನು ಹೊಂದಿದ್ದಾರೆ. ನಮ್ಮ ಪ್ರಕಾರ, ವಿವೇಚನೆಯು ಪ್ರಾಮಾಣಿಕ ಉದ್ದೇಶಗಳಿಗಾಗಿ ಬಳಸಬೇಕು. ಈ ಸಂದರ್ಭದಲ್ಲಿ ವಿವೇಚನೆಯ ಬಳಕೆ ಅಥವಾ ಬಳಕೆಯಾಗದಿರುವುದು ಅನಿಯಂತ್ರಿತ ಮತ್ತು ಅಸಮರ್ಪಕವಾಗಿದೆ" ಎಂದ ನ್ಯಾಯಾಲಯ, ಶುಕ್ರವಾರ ಬೆಳಗ್ಗೆ 11 ಗಂಟೆಯೊಳಗೆ ರಾಜೀನಾಮೆ ಅಂಗೀಕರಿಸಿ ಸೂಕ್ತ ಪತ್ರ ನೀಡುವಂತೆ ಸಂಬಂಧಪಟ್ಟ ಬಿಎಂಸಿ ಅಧಿಕಾರಿಗೆ ಸೂಚಿಸಿದೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಸರ್ಕಾರಿ ಉದ್ಯೋಗಿಯ ರಾಜೀನಾಮೆಯನ್ನು ಅಂಗೀಕರಿಸುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com