ಮಾವೋವಾದಿಗಳ ಜತೆ ಸಂಪರ್ಕ ಕೇಸ್: ಜಿಎನ್ ಸಾಯಿಬಾಬಾ ಖುಲಾಸೆ, ಬಾಂಬೈ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ
ಮಾವೋವಾದಿಗಳ ಜೊತೆ ಸಂಪರ್ಕ ಕೇಸ್ ಗೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
Published: 14th October 2022 07:46 PM | Last Updated: 14th October 2022 07:47 PM | A+A A-

ಸುಪ್ರೀಂಕೋರ್ಟ್
ನವದೆಹಲಿ: ಮಾವೋವಾದಿಗಳ ಜೊತೆ ಸಂಪರ್ಕ ಕೇಸ್ ಗೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಬಾಂಬೆ ಹೈಕೋರ್ಟ್ ಆದೇಶ ಹೊರಬಿದ್ದ ಕೆಲವು ತಾಸುಗಳ ನಂತರ ಅದಕ್ಕೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ದಳ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಆದಾಗ್ಯೂ, ರಿಜಿಸ್ಟ್ರಿಯಲ್ಲಿ ತುರ್ತಾಗಿ ಆಲಿಸಲು ಅರ್ಜಿ ಸಲ್ಲಿಸಲು ರಾಷ್ಟ್ರೀಯ ತನಿಖಾ ದಳಕ್ಕೆ ಉನ್ನತ ನ್ಯಾಯಾಲಯ ಅವಕಾಶ ನೀಡಿತು.
ಇದನ್ನೂ ಓದಿ: ಮಾವೋವಾದಿಗಳ ಜತೆ ಸಂಪರ್ಕ ಕೇಸ್: ದೆಹಲಿ ವಿವಿ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಖುಲಾಸೆ
ಕಕ್ಷಿದಾರರು ನ್ಯಾಯಾಲಯದ ಮುಂದೆ ಇಲ್ಲದಿರುವ ಕಾರಣ ಖುಲಾಸೆ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಮುಖ್ಯ ನ್ಯಾಯಾಧೀಶರಿಂದ ವಿಷಯದ ತುರ್ತು ಆಲಿಸುವ ಬಗ್ಗೆ ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ರಿಜಿಸ್ಟ್ರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿತು.
ಇದಕ್ಕೂ ಮುನ್ನಾ ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 8 ವರ್ಷಗಳ ನಂತರ ಸಾಯಿಬಾಬಾ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಆದೇಶಿಸಿತು.