ದೇಶದಲ್ಲೇ ಮೊದಲು: ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ಎಂಬಿಬಿಎಸ್ ಕಲಿಕೆ

ಮಧ್ಯಪ್ರದೇಶ ಸರ್ಕಾರವು ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೂರು ಪಠ್ಯದ ವಿಷಯಗಳನ್ನು ಹಿಂದಿಯಲ್ಲಿ ಕಲಿಸಲು ಸಜ್ಜಾಗಿದೆ.
ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಸಿಎಂ ಶಿವರಾಜ್ ಸಿಂಗ್ ಚೌಹಾಣ್
Updated on

ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೂರು ಪಠ್ಯದ ವಿಷಯಗಳನ್ನು ಹಿಂದಿಯಲ್ಲಿ ಕಲಿಸಲು ಸಜ್ಜಾಗಿದೆ.

ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೂರು ವಿಷಯಗಳಾದ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರವನ್ನು ಹಿಂದಿಯಲ್ಲಿ ಕಲಿಸಲಾಗುತ್ತದೆ. ಅಕ್ಟೋಬರ್ 16 ರಂದು ಭೋಪಾಲ್‌ನಲ್ಲಿ ಭಾಷಾಂತರಿಸಿದ ಎಂಬಿಬಿಎಸ್ ಪ್ರಥಮ ವರ್ಷದ ಪುಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡುವ ಮೂಲಕ ರಾಜ್ಯದಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಹಿಂದಿಯಲ್ಲಿ ಕಲಿಯಲು ಮತ್ತು ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಇದು ಬದಲಾಯಿಸುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಹಿಂದಿ ಮಾಧ್ಯಮದಲ್ಲೂ ಶಿಕ್ಷಣದ ಮೂಲಕ ಜೀವನದಲ್ಲಿ ಮುನ್ನಡೆಯಬಹುದು ಎಂಬ ಚಿಂತನೆಯನ್ನು ಆಚರಣೆಗೆ ತರುವ ನಿಟ್ಟಿನಲ್ಲಿ ಇದೊಂದು ಹೆಜ್ಜೆಯಾಗಿದೆ. ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದೆ ಎಂದರು.

ಪುಸ್ತಕಗಳ ಹಿಂದಿ ಭಾಷಾಂತರಕ್ಕಾಗಿ, ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ‘ಮಂದರ್’ ಹಿಂದಿ ಕೋಶವನ್ನು ರಚಿಸುವ ಮೂಲಕ ಸುಸಂಘಟಿತ ಪಠ್ಯಕ್ರಮವನ್ನು ಸಿದ್ಧಪಡಿಸಲಾಯಿತು. ಕಾರ್ಯಪಡೆಯು ವೈದ್ಯಕೀಯ ಕ್ಷೇತ್ರದ ತಜ್ಞರನ್ನು ಒಳಗೊಂಡಿದೆ. 97 ವೈದ್ಯಕೀಯ ಕಾಲೇಜು ಶಿಕ್ಷಕರು ಮತ್ತು ತಜ್ಞರು 5,568 ಗಂಟೆಗಳಿಗೂ ಹೆಚ್ಚು ಕಾಲ ಇದಕ್ಕಾಗಿ ಶ್ರಮಿಸಿದರು.

ಇಂಗ್ಲಿಷ್ ಪುಸ್ತಕಗಳ ಜೊತೆಗೆ ಹಿಂದಿ ಪುಸ್ತಕಗಳು ಲಭ್ಯವಿರುತ್ತವೆ, ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲಿ ಉಳಿಯುತ್ತವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್‌ನ ಪೈಲಟ್ ಪ್ರಾಜೆಕ್ಟ್ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಮಧ್ಯಪ್ರದೇಶದ ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ನ ಮೊದಲ ವರ್ಷದಲ್ಲಿ ಹಿಂದಿಯಲ್ಲಿ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಮತ್ತು ಜೀವ ರಸಾಯನಶಾಸ್ತ್ರವನ್ನು ಕಲಿಸಲಾಗುತ್ತದೆ. ಮುಂದಿನ ಬಾರಿ MBBS ಎರಡನೇ ವರ್ಷದಲ್ಲೂ ಇದನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಹಿಂದಿ ಭಾಷೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಕೋರ್ಸ್ ಅಥವಾ ತರಗತಿ ಇರುವುದಿಲ್ಲ ಎಂದು ಸಚಿವ ವಿಶ್ವಾಸ್ ಸಾರಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com