ಲಂಚ ಪ್ರಕರಣ: ಪಂಜಾಬ್ ಮಾಜಿ ಸಚಿವ ಸುಂದರ್ ಶಾಮ್ ಅರೋರಾರನ್ನು ಬಂಧಿಸಿದ ರಾಜ್ಯದ ವಿಜಿಲೆನ್ಸ್ ಬ್ಯೂರೊ

ತನ್ನ ವಿರುದ್ಧ ನಡೆಯುತ್ತಿದ್ದ ವಿಚಾರಣೆಯಿಂದ ತನ್ನ ಹೆಸರನ್ನು ತೆಗೆದುಹಾಕಲು ಸಹಾಯ ಮಾಡುವಂತೆ ವಿಜಿಲೆನ್ಸ್ ಅಧಿಕಾರಿಯೊಬ್ಬರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಪಂಜಾಬ್‌ನ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸುಂದರ್ ಶಾಮ್ ಅರೋರಾ ಅವರನ್ನು ರಾಜ್ಯ ವಿಜಿಲೆನ್ಸ್ ಬ್ಯೂರೊ ಬಂಧಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಚಂಡೀಗಢ: ತನ್ನ ವಿರುದ್ಧ ನಡೆಯುತ್ತಿದ್ದ ವಿಚಾರಣೆಯಿಂದ ತನ್ನ ಹೆಸರನ್ನು ತೆಗೆದುಹಾಕಲು ಸಹಾಯ ಮಾಡುವಂತೆ ವಿಜಿಲೆನ್ಸ್ ಅಧಿಕಾರಿಯೊಬ್ಬರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಪಂಜಾಬ್‌ನ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಸುಂದರ್ ಶಾಮ್ ಅರೋರಾ ಅವರನ್ನು ರಾಜ್ಯ ವಿಜಿಲೆನ್ಸ್ ಬ್ಯೂರೊ ಬಂಧಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮೊಹಾಲಿಯ ಜಿರಾಕ್‌ಪುರದಲ್ಲಿ ಶನಿವಾರ ರಾತ್ರಿ ಅರೋರಾ ಅವರು ನಗದು ಹಣವನ್ನು ವಿಜಿಲೆನ್ಸ್ ಬ್ಯೂರೋದ ಸಹಾಯಕ ಇನ್ಸ್‌ಪೆಕ್ಟರ್ ಜನರಲ್‌ಗೆ ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಂಧನಕ್ಕೊಳಗಾದ  ಹಿಂದಿನ ಸರ್ಕಾರದ ಮೂರನೇ ಮಾಜಿ ಸಚಿವರಾಗಿದ್ದು, ಈ ಹಿಂದೆ ವಿಜಿಲೆನ್ಸ್ ಬ್ಯೂರೋದ ವಿವಿಧ ಪ್ರಕರಣಗಳಲ್ಲಿ ಮಾಜಿ ಸಚಿವರಾದ ಸಾಧು ಸಿಂಗ್ ಧರಂಸೋತ್ ಮತ್ತು ಭರತ್ ಭೂಷಣ್ ಆಶು ಅವರನ್ನು ಬಂಧಿಸಲಾಗಿತ್ತು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅರೋರಾ, ತಮ್ಮ ಅವಧಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಅರೋರಾ ಅವರು ಈ ವರ್ಷದ ಜೂನ್‌ನಲ್ಲಿ ಕಾಂಗ್ರೆಸ್ ತೊರೆದು ನಂತರ ಬಿಜೆಪಿ ಸೇರಿದ್ದರು.

ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಮುಖ್ಯ ನಿರ್ದೇಶಕ ವರೀಂದರ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣಗಳಲ್ಲಿ ತನಗೆ ಸಹಾಯ ಮಾಡಲು ವಿಜಿಲೆನ್ಸ್ ಅಧಿಕಾರಿಗೆ 50 ಲಕ್ಷ ರೂಪಾಯಿ ಲಂಚ ನೀಡಿದ ಆರೋಪದ ಮೇಲೆ ಅರೋರಾ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಅರೋರಾ ಅವರು ಅಕ್ಟೋಬರ್ 14 ರಂದು ವಿಚಾರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಎಐಜಿ ಮನಮೋಹನ್ ಕುಮಾರ್ ಶರ್ಮಾ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ವಿಚಾರಣೆಯಲ್ಲಿ ಅವರ ಹೆಸರನ್ನು ತೆಗೆದುಹಾಕಲು ಸಹಾಯ ಮಾಡುವಂತೆ ಕೇಳಿದ್ದಾರೆ. ಅದಕ್ಕಾಗಿ ಅವರು ಒಂದು ಕೋಟಿ ರೂಪಾಯಿ ಕೊಡಲು ಮುಂದಾಗಿದ್ದರು ಎಂದು ಕುಮಾರ್ ತಿಳಿಸಿದ್ದಾರೆ.

ಮೊದಲ ಕಂತಾಗಿ 50 ಲಕ್ಷ ರೂ.ಗಳನ್ನು ಪಾವತಿಸಿ ಉಳಿದ ಮೊತ್ತವನ್ನು ನಂತರ ಕೊಡುವುದಾಗಿ ತಿಳಿಸಿದ್ದರು. ಶರ್ಮಾ ಅವರು ಇದನ್ನು ವರಿಷ್ಠರ ಗಮನಕ್ಕೆ ತಂದ ನಂತರ ಪ್ರಕರಣ ದಾಖಲಿಸಿಕೊಂಡು ಅರೋರಾ ಬಂಧನಕ್ಕೆ ಬಲೆ ಬೀಸಲಾಗಿದೆ. 50 ಲಕ್ಷ ನಗದು ಇರುವ ಬ್ಯಾಗನ್ನು ಹಸ್ತಾಂತರಿಸಲು ಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ಅರೋರಾ ಅವರನ್ನು ಮೊಹಾಲಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಅವರು ಹಿಂದಿನ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದಾಗ ಪಂಜಾಬ್ ಸಣ್ಣ ಕೈಗಾರಿಕೆಗಳು ಮತ್ತು ರಫ್ತು ನಿಗಮದ ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆಯಲ್ಲಿನ ಅಕ್ರಮಗಳ ಕುರಿತಾದ ಪ್ರಕರಣದಲ್ಲಿ ವಿಜಿಲೆನ್ಸ್ ಬ್ಯೂರೋದ ತನಿಖೆಯನ್ನು ಎದುರಿಸುತ್ತಿದ್ದಾರೆ.

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚಿಸಿದ ನಂತರ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರುತ್ತದೆ ಎಂದು ಅದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com