ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮತದಾನ ಆರಂಭ: ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ v/s ಶಶಿ ತರೂರು ಏನೆಂದರು?

ದೇಶದ ಅತಿ ಹಳೆಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ 2 ದಶಕಗಳ ನಂತರ ಚುನಾವಣೆ ನಡೆಯುತ್ತಿದೆ.
ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶದ ಅತಿ ಹಳೆಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(Indian National Congress)ನ ಅಧ್ಯಕ್ಷ ಸ್ಥಾನಕ್ಕೆ 2 ದಶಕಗಳ ನಂತರ ಚುನಾವಣೆ ನಡೆಯುತ್ತಿದೆ. ಇದು ಕರ್ನಾಟಕ ಮೂಲದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಭಾರತೀಯ ವಿದೇಶ ಸೇವೆ( Indian foreign service)ಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿ ನಂತರ ಸಕ್ರಿಯ ರಾಜಕಾರಣಕ್ಕಿಳಿದು ಕೇರಳದ ಸಂಸದರಾಗಿರುವ ಶಶಿ ತರೂರು ನಡುವಿನ ಸ್ಪರ್ಧೆ.

ಮೇಲ್ನೋಟಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದ್ದರೂ ಗೌಪ್ಯ ಮತದಾನ ನಡೆಯುತ್ತಿರುವುದರಿಂದ ಕುತೂಹಲವಿದೆ. ಇಂದು ಬೆಳಗ್ಗೆ 10 ಗಂಟೆಗೆ ಮತದಾನ ಆರಂಭವಾಗಿದ್ದು ಸಾಯಂಕಾಲ 4 ಗಂಟೆಯವರೆಗೆ ಮುಂದುವರಿಯಲಿದೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಇದು ಆಂತರಿಕ ಚುನಾವಣೆಯ ಭಾಗವಾಗಿದೆ. ನಾವಿಬ್ಬರು ಸ್ಪರ್ಧಿಗಳು ಏನೇ ಹೇಳಿಕೊಂಡರೂ ಅದು ಸ್ನೇಹದಿಂದ ಹೊರತು ದ್ವೇಷದಿಂದಲ್ಲ. ನಾವೆಲ್ಲರೂ ಇಂದು ಒಟ್ಟಾಗಿ ಪಕ್ಷವನ್ನು ಬೆಳೆಸಬೇಕಿದೆ. ಶಶಿ ತರೂರ್ ಅವರು ನನಗೆ ದೂರವಾಣಿ ಮೂಲಕ ಕರೆ ಮಾಡಿ ಶುಭಾಶಯ ತಿಳಿಸಿದರು, ನಾನು ಕೂಡ ಅವರಿಗೆ ಶುಭಾಶಯ ತಿಳಿಸಿದೆ ಎಂದು ಹೇಳಿದರು.

ಇನ್ನು ಚುನಾವಣೆ ಆರಂಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಶಿ ತರೂರ್, ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದ ಭವಿಷ್ಯ ಕಾರ್ಯಕರ್ತರ ಮೇಲೆ ನಿಂತಿದೆ. ಕಾಂಗ್ರೆಸ್ ಪಕ್ಷದ ಪುನರುಜ್ಜೀವನ ಆರಂಭವಾಗಿದೆ ಎಂದು ನಾನು ನಂಬುತ್ತೇನೆ. ಇಂದು ಬೆಳಗ್ಗೆ ನಾನು ಖರ್ಗೆಯವರ ಬಳಿ ಮಾತನಾಡಿದ್ದು ಏನೇ ನಡೆದರೂ, ಏನೇ ಮಾತನಾಡಿದ್ದರೂ ಮುಂದೆ ಸಹೋದ್ಯೋಗಿಗಳಾಗಿ ಸ್ನೇಹಿತರಾಗಿಯೇ ಇರೋಣ ಎಂದು ಹೇಳಿದ್ದೇನೆ. ಖರ್ಗೆಯವರ ಪರವಾಗಿ ನಾಯಕರು ಮತ್ತು ಪರಿಸ್ಥಿತಿಗಳು ಇದ್ದುದರಿಂದ ನಾನು ಸ್ವಲ್ಪ ಒರಟಾಗಿ ಮಾತನಾಡಿರಬಹುದು. ಆದರೆ ಅವೆಲ್ಲವನ್ನೂ ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ತಿರುವನಂತಪುರದಲ್ಲಿ ಮಾತನಾಡುತ್ತಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com