ಮತದಾನ ಮುಕ್ತಾಯ: ಯಾರಾಗ್ತಾರೆ ಕಾಂಗ್ರೆಸ್ ಅಧ್ಯಕ್ಷ; 'ನಿಷ್ಠಾವಂತ' ಖರ್ಗೆ? 'ಬದಲಾವಣೆಯ' ತರೂರ್?

ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿದೆ.
ಶಶಿ ತರೂರ್ - ಮಲ್ಲಿಕಾರ್ಜುನ ಖರ್ಗೆ
ಶಶಿ ತರೂರ್ - ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿದೆ.

ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ನಿಷ್ಠಾವಂತ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದಲ್ಲಿ ಬದಲಾವಣೆ ಬಯಸುತ್ತಿರುವ ನಾಯಕ ಶಶಿ ತರೂರ್ ಅವರ ಭವಿಷ್ಯ ಅಕ್ಟೋಬರ್ 19 ರಂದು ನಿರ್ಧಾರವಾಗಲಿದೆ.

ಸುಮಾರು 137 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಆರನೇ ಬಾರಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷರ ಗಾದಿ ಯಾರಿಗೆ ಒಲಿಯಲಿದೆ ಎಂಬುದು ಬುಧವಾರ ನಿರ್ಧಾರವಾಗಲಿದೆ.

ಮತದಾನ ಮುಕ್ತಾಯವಾದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯುತ್ತಮವಾಗಿ ನಡೆದಿದೆ. ಒಟ್ಟು 9,500 ಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ. ಶೇ. 96 ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದೆ ಮತ್ತು ಅದರಿಂದ ಇತರ ಪಕ್ಷಗಳು ಪಾಠ ಕಲಿಯಬಹುದು ಎಂದು ಮಿಸ್ತ್ರಿ ಹೇಳಿದರು.

ಇದು ರಹಸ್ಯ ಮತದಾನವಾಗಿದ್ದು, ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುದು  ತಿಳಿಯುವುದಿಲ್ಲವಾದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮಿಸ್ತ್ರಿ ತಿಳಿಸಿದ್ದಾರೆ.

ಮಂಗಳವಾರ ಸಂಜೆಯ ವೇಳೆಗೆ ಎಲ್ಲಾ ಮತಪೆಟ್ಟಿಗೆಗಳು ದೆಹಲಿಯ ಎಐಸಿಸಿ ಕಚೇರಿಗೆ ಬರಲಿದ್ದು, ಮತ ಎಣಿಕೆ ಆರಂಭವಾಗುವ ಮುನ್ನ ಅವುಗಳನ್ನು ಸಂಪೂರ್ಣವಾಗಿ ಮಿಶ್ರಣ ಮಾಡಲಾಗುವುದು ಎಂದರು.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದಲ್ಲಿ 503 ಮತಗಳಿದ್ದು, ಒಟ್ಟು 501 ಮತಗಳು ಚಲಾವಣೆಗೊಂಡಿವೆ. ನಿವೇದಿತ್ ಅಳ್ವಾ ಹಾಗೂ ಪ್ರಶಾಂತ್ ದೇಶಪಾಂಡೆ ವಿದೇಶದಲ್ಲಿ ಇರುವ ಕಾರಣ, ಅವರು ಮತದಾನ ಮಾಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com