ದೇರಾ ಸಚ್ಚಾ ಸೌದಾ ಪ್ರಕರಣ: ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಪೆರೋಲ್, ದರ್ಶನಕ್ಕೆ ಸಾಲುಗಟ್ಟಿದ ರಾಜಕೀಯ ನಾಯಕರು!
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಪೆರೋಲ್ ದೊರೆತ ಬೆನ್ನಲ್ಲೇ ವಿವಾದಿತ ಸ್ವಯಂ ಘೋಷಿತ ದೇವ ಮಾನವನ ದರ್ಶನಕ್ಕೆ ರಾಜಕೀಯ ನಾಯಕರು ಸಾಲಗಟ್ಟಿ ನಿಂತಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ 40 ದಿನಗಳ ಪರೋಲ್ (ಜಾಮೀನು) ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 3 ರಂದು ನಡೆಯಲಿರುವ ಅದಮ್‌ಪುರ್ ಉಪ ಚುನಾವಣೆ ಮತ್ತು ನವೆಂಬರ್ 12 ರಂದು ನಡೆಯಲಿರುವ ಹರ್ಯಾಣ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ತನ್ನ ಪಂಥದ ಮಾಜಿ ಮ್ಯಾನೇಜರ್ ಒಬ್ಬರನ್ನು ಕೊಲೆಗೈದ ಪ್ರಕರಣದಲ್ಲಿ ರಾಮ್ ರಹೀಂ ಸಿಂಗ್ ಮತ್ತು ಇತರ ನಾಲ್ವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆತ 20 ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದರು. ಅವರು ರೋಹ್ತಕ್‌ನ ಸುನಾರಿಯ ಜೈಲಿನಲ್ಲಿದ್ದಾರೆ. ಆತನು ಪರೋಲ್ ಅವಧಿಯಲ್ಲಿ ಹರ್ಯಾಣದ ಸಿರ್ಸಾ ಅಥವಾ ರಾಜಸ್ಥಾನದಲ್ಲಿರುವ ದೇರಾದ ಆಶ್ರಮದಲ್ಲಿ ತಂಗುವ ನಿರೀಕ್ಷೆಯಿದೆ.
ಇದು ಈ ವರ್ಷ ಸಿಂಗ್‌ಗೆ ದೊರೆತ ಮೂರನೇ ಪರೋಲ್ ಆಗಿದ್ದು, ಜೂನ್‌ನಲ್ಲಿ ಆತನನ್ನು ಒಂದು ತಿಂಗಳ ಪರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ, ಪಂಜಾಬ್ ಚುನಾವಣೆಗೆ ಪೂರ್ವಭಾವಿಯಾಗಿ ಅವನಿಗೆ 21 ದಿನಗಳ ಪರೋಲ್ ನೀಡಲಾಗಿತ್ತು.
ಚುನಾವಣೆ ಎಫೆಕ್ಟ್: ಸ್ವಯಂ ಘೋಷಿತ ದೇವಮಾನವನ ದರ್ಶನಕ್ಕೆ ಸಾಲುಗಟ್ಟಿದ ರಾಜಕೀಯ ನಾಯಕರು
ಚುನಾವಣೆ ಬೆನ್ನಲ್ಲೇ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಂಗೆ ಸಿಂಗ್ ಗೆ ಪೆರೋಲ್ ದೊರೆತಿದ್ದು, ಸ್ವಯಂ ಘೋಷಿತ ದೇವಮಾನವನ ಭೇಟಿ ಮಾಡಲು ಹಲವು ರಾಜಕೀಯ ಮುಖಂಡರು ಸಾಲುಗಟ್ಟಿದ್ದಾರೆ. ಪ್ರಮುಖವಾಗಿ ಹರಿಯಾಣದ ಕರ್ನಾಲ್‌ನ ಮೇಯರ್ ಮತ್ತು ಆಡಳಿತಾರೂಢ ಬಿಜೆಪಿಯ ಹಲವಾರು ನಾಯಕರು ಸೇರಿದಂತೆ ಅನೇಕ ರಾಜಕಾರಣಿಗಳು ರಾಮ್ ರಹೀಂ ಸಿಂಗ್ ರ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎನ್ನಲಾಗಿದೆ.
ಕರ್ನಾಲ್ ಮೇಯರ್ ರೇಣು ಬಾಲ ಗುಪ್ತಾ, ಉಪ ಮೇಯರ್ ನವೀನ್ ಕುಮಾರ್ ಮತ್ತು ಹಿರಿಯ ಉಪ ಮೇಯರ್ ರಾಜೇಶ್ ಅಗ್ಗಿ, ಚುನಾವಣೆಗೆ ಇತರ ಅಭ್ಯರ್ಥಿಗಳು ಪಾಲ್ಗೊಳ್ಳಲ್ಲಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಶ್ರೀ ಕುಮಾರ್ ಅವರು, '"ನನ್ನನ್ನು ಸದ್ ಸಂಗತ್‌ನಿಂದ ಸತ್ಸಂಗಕ್ಕೆ ಆಹ್ವಾನಿಸಲಾಗಿತ್ತು. ಆನ್‌ಲೈನ್ ಸತ್ಸಂಗವನ್ನು ಉತ್ತರ ಪ್ರದೇಶದಿಂದಲೇ ಪಾಲ್ಗೊಂಡಿದ್ದೆ. ನನ್ನ ವಾರ್ಡ್‌ನಲ್ಲಿ ಅನೇಕ ಜನರು ಬಾಬಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ನಾವು ಸಾಮಾಜಿಕ ಸಂಪರ್ಕದಿಂದ ಕಾರ್ಯಕ್ರಮವನ್ನು ತಲುಪಿದ್ದೇವೆ ಮತ್ತು ಅದಕ್ಕೂ ಭಾರತೀಯ ಜನತಾ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಾಬಾ ಭೇಟಿಗೂ ಮುಂಬರುವ ಉಪಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ