
ಆರೋಪಿಗಳು
ಹೈದರಾಬಾದ್: ತೀವ್ರ ಸಂಚಲನ ಮೂಡಿಸಿದ್ದ ಟಿಆರ್ ಎಸ್ 'ಶಾಸಕರ ಖರೀದಿ' ಪ್ರಕರಣದ ಮೂವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಶನಿವಾರ ಮತ್ತೆ ಬಂಧಿಸಿದ್ದಾರೆ.
ಆರೋಪಿಗಳ ಬಂಧನವನ್ನು ತಿರಸ್ಕರಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ತೆಲಂಗಾಣ ಹೈಕೋರ್ಟ್ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ.
ನಂದು ಅವರ ನಿವಾಸದಲ್ಲಿ ಬಿಜೆಪಿ ಜೊತೆ ನಂಟು ಹೊಂದಿದ್ದ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ಕೋರೆ ನಂದ ಕುಮಾರ್ ಅಲಿಯಾಸ್ ನಂದು ಮತ್ತು ಸಿಂಹಯಾಜಿ ಅವರನ್ನು ಬಂಧಿಸಲಾಗಿದೆ.
ಇದನ್ನು ಓದಿ: ಟಿಆರ್ ಎಸ್ ಶಾಸಕರ ಖರೀದಿ ಯತ್ನ ಕೇಸು: ರಾಜ್ಯ ಸರ್ಕಾರ ಪರವಾಗಿ ಹೈಕೋರ್ಟ್ ಆದೇಶ
ನಂತರ ಆರೋಪಿಗಳನ್ನು ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ಗೆ ಕರೆದೊಯ್ದು, ಅಲ್ಲಿಂದ ಮೊಯಿನಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಅಕ್ಟೋಬರ್ 26 ರಂದು ತೋಟದ ಮನೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ(ಟಿಆರ್‌ಎಸ್) ನಾಲ್ವರು ಶಾಸಕರಿಗೆ ಭಾರಿ ಹಣದ ಆಮಿಷ ಒಡ್ಡಲು ಪ್ರಯತ್ನಿಸುತ್ತಿದ್ದಾಗ ಅವರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಆರೋಪಿಗಳನ್ನು ಮತ್ತೆ ಹಾಜರುಪಡಿಸಿದರೆ ಅವರನ್ನು ಕಸ್ಟಡಿಗೆ ಕಳುಹಿಸುವಂತೆ ಕೆಳ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದ ಒಂದೆರಡು ಗಂಟೆಗಳ ನಂತರ ಆರೋಪಿಗಳನ್ನು ಮತ್ತೆ ಬಂಧಿಸಲಾಗಿದೆ.