ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದಾಳೆಂದು ಶಂಕಿಸಿ ನಿಂದಿಸಿದ ಶಿಕ್ಷಕಿ: ಮನನೊಂದ ಬಾಲಕಿ ಆತ್ಮಹತ್ಯೆ

ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದಾಳೆಂದು ಶಂಕಿಸಿದ ಶಿಕ್ಷಕಿ ಬೈದು, ಅವಮಾನಿಸಿದ್ದಕ್ಕೆ ನೊಂದ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಂಚಿ: ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದಾಳೆಂದು ಶಂಕಿಸಿದ ಶಿಕ್ಷಕಿ ಬೈದು, ಅವಮಾನಿಸಿದ್ದಕ್ಕೆ ನೊಂದ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ನಡೆದಿದೆ.

ಸರದಾಮೋನಿ ಬಾಲಕಿಯರ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ರಿತು ಮುಖಿ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಅಕ್ಟೋಬರ್ 14 ರಂದು ಶಾಲೆಯಿಂದ ಮನೆಗೆ ಹಿಂದಿರುಗಿದ ರಿತು, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. 7 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ರಿತು ಅಕ್ಟೋಬರ್ 21 ರಂದು ಕೊನೆಯುಸಿರೆಳೆದಿದ್ದಾಳೆ. 

ರಿತು ಶಾಂತ ಸ್ವಭಾವದ ಹುಡುಗಿಯಾಗಿದ್ದು, ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಕುಟುಂಬಕ್ಕೆ ಸಹಾಯ ಮಾಡಲು ಬಯಸಿದ್ದ ರಿತು, ಚೆನ್ನಾಗಿ ಓದಿ ಸರ್ಕಾರಿ ಅಧಿಕಾರಿಯಾಗುವ ಕನಸ್ಸು ಹೊಂದಿದ್ದಳು. ಅಕ್ಟೋಬರ್ 14 ರಂದು, ತಾಯಿ ಮತ್ತು ಸಹೋದರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ, ಸಹೋದರಿಯನ್ನು ನೆರೆಮನೆಗೆ ಕಳುಹಿಸಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಬೆಂಕಿ ಇಡೀ ದೇಹವನ್ನು ಆವರಿಸಿದಾಗ ಬೀದಿಗೆ ಓದಿ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಾಲಕಿಯ ಕೂಗು ಕೇಳಿದ ನೆರೆಮನೆಯವರು ಬೆಂಕಿ ನಂದಿಸಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಪರೀಕ್ಷೆ ವೇಳೆ ಶಿಕ್ಷಕಿ ಮೋಸ ಮಾಡುತ್ತಿದ್ದೇನೆಂದು ಆರೋಪಿಸಿದರು. ಬಳಿಕ ಕೆನ್ನಗೆ ಹೊಡೆದು ಬಟ್ಟೆ ಬಿಚ್ಚುವಂತೆ ಹೇಳಿದರು ಎಂದು ಹೇಳಿದ್ದಾಳೆ. ಘಟನೆ ತೀವ್ರ ಮುಜುಗರವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ. 

ಇದೀಗ ಶಿಕ್ಷಕಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ವೇಳೆ ಶಿಕ್ಷಕಿ ತನ್ನ ಮೇಲೆ ಬಂದ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ, ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ರಿತು ಆರೋಪ ಸತ್ಯ ಎಂದು ಹೇಳಿದ್ದಾರೆ. ಘಟನೆ ಬಳಿಕ ಶಾಲೆಯ ಪ್ರಾಂಶುಪಾಲೆ ಗೀತಾ ಮಹತೋ ಅವರು ಶಿಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com