ಗಾಂಧಿ ಕಾಂಗ್ರೆಸ್ ಪುನರುಜ್ಜೀವನಗೊಳಿಸಿದರೆ ಮಾತ್ರ ಗೋಡ್ಸೆ ಸಿದ್ದಾಂತಕ್ಕೆ ಸೋಲು: ಆರ್‌ಎಸ್‌ಎಸ್‌ ನಿಜವಾದ ಕಾಫಿ, ಬಿಜೆಪಿ ಕೇವಲ ನೊರೆ!

ಆರ್‌ಎಸ್‌ಎಸ್‌ ನಿಜವಾದ ಕಾಫಿ. ಬಿಜೆಪಿ ಕಾಫಿಯ ನೊರೆ ಇದ್ದಂತೆ ಎಂದು ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ ಹೇಳಿಕೆ ನೀಡಿದ್ದಾರೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಪಾಟ್ನಾ: ಆರ್‌ಎಸ್‌ಎಸ್‌ ನಿಜವಾದ ಕಾಫಿ. ಬಿಜೆಪಿ ಕಾಫಿಯ ನೊರೆ ಇದ್ದಂತೆ ಎಂದು ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ ಹೇಳಿಕೆ ನೀಡಿದ್ದಾರೆ.

ಬಿಹಾರದಲ್ಲಿ 3,500 ಕಿಲೋಮೀಟರ್‌ವರೆಗೆ ಕಿಶೋರ್‌ ಪಾದಯಾತ್ರೆ ಕೈಗೊಂಡಿದ್ದಾರೆ. ಅಕ್ಟೋಬರ್ 2 ರಿಂದ ಕಾಲ್ನಡಿಗೆ ಆರಂಭಿಸಿದ್ದಾರೆ. ಪಾದಯಾತ್ರೆ ವೇಳೆ ಮಾತನಾಡಿದ ಅವರು, ನೀವು ಒಂದು ಕಪ್ ಕಾಫಿಯನ್ನು ನೋಡಿದ್ದೀರಾ? ಅದರ ತುದಿಯಲ್ಲಿ ನೊರೆ ಇರುತ್ತದೆ.

ಬಿಜೆಪಿ ಕೂಡ ಅದರ ಹಾಗೆ. ಅದರ ಕೆಳಗೆ ಆರೆಸ್ಸೆಸ್‌ನ ಆಳವಾದ ಸಂರಚನೆಯಿದೆ. ಸಂಘವು ಸಾಮಾಜಿಕ ಹೆಣಿಗೆಗಳ ಒಳಗೆ ತನ್ನ ಪಥವನ್ನು ಬೇರೂರಿಸಿದೆ. ಅದನ್ನು ಅಡ್ಡದಾರಿಗಳ ಮೂಲಕ ಈಗ ಸೋಲಿಸಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

ಗೋಡ್ಸೆ (ನಾಥೂರಾಮ್) ಸಿದ್ಧಾಂತವನ್ನು ಗಾಂಧಿಯ ಕಾಂಗ್ರೆಸ್ ಪುನಶ್ಚೇತನದಿಂದ ಮಾತ್ರವೇ ಮಣಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಯಿತು. ನಿತೀಶ್ ಕುಮಾರ್ ಮತ್ತು ಜಗನ್ ಮೋಹನ್ ರೆಡ್ಡಿ ಅವರಂತಹ ಜನರಿಗೆ ಸಹಾಯ ಮಾಡುವ ಬದಲು, ಅವರ ಮಹತ್ವಾಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಆ ದಿಕ್ಕಿನಲ್ಲಿ ನಾನು ಕೆಲಸ ಮಾಡಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ಹೇಳಿದ್ದಾರೆ.

ನಾನು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷನಾಗಿದ್ದಾಗ ಸಿಎಎ- ಎನ್‌ಪಿಆರ್- ಎನ್‌ಸಿಆರ್ ವಿರುದ್ಧ ದೇಶ ಕುದಿಯುತ್ತಿತ್ತು. ನನ್ನ ಪಕ್ಷದ ಸಂಸದರು ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪರ ಮತ ಹಾಕಿದ್ದಾರೆ ಎನ್ನುವುದು ತಿಳಿದು ಆಘಾತವಾಗಿತ್ತು" ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.

"ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದೆ. ತಾವು ಪ್ರವಾಸದಲ್ಲಿದ್ದು, ಈ ಬೆಳವಣಿಗೆ ಕುರಿತು ಅರಿವಿಲ್ಲ. ಆದರೆ ಬಿಹಾರದಲ್ಲಿ ಎನ್‌ಆರ್‌ಸಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಇಂತಹ ಇಬ್ಬಗೆ ನಿಲುವು ಕಂಡ ಬಳಿಕ, ಈ ವ್ಯಕ್ತಿ ಜತೆ ಕೆಲಸ ಮಾಡುವುದು ನನಗೆ ಸಾಧ್ಯವಿಲ್ಲ ಎನ್ನುವುದು ಅರ್ಥವಾಗಿತ್ತು" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com