ಬಿಹಾರ ಸಿಎಂ ನಿತೀಶ್ ಕುಮಾರ್​​​ಗೆ ಭಾರೀ ಹಿನ್ನಡೆ: ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿ ತೆಕ್ಕೆಗೆ!

ಮಣಿಪುರದ ಐವರು ಜೆಡಿಯು ಶಾಸಕರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ.
ನಿತೀಶ್ ಕುಮಾರ್
ನಿತೀಶ್ ಕುಮಾರ್

ಇಂಫಾಲ(ಮಣಿಪುರ): ಶುಕ್ರವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಮಣಿಪುರದ ಐವರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ.

ಈ ಕುರಿತು ಮಣಿಪುರ ವಿಧಾನಸಭೆಯ ಕಾರ್ಯದರ್ಶಿ ಕೆ.ಮೇಘಜಿತ್‌ ಸಿಂಗ್‌ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಐವರು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದನ್ನು ಸ್ಪೀಕರ್‌ ಅವರು ಅನುಮೋದಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿರುವ ನಿತೀಶ್​​ ಕುಮಾರ್​ ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಇದರ ಮಧ್ಯೆ ಮಣಿಪುರದಲ್ಲಿ ಐವರು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಕಳೆದ ಮಾರ್ಚ್​ ತಿಂಗಳಲ್ಲಿ ನಡೆದ ಮಣಿಪುರ ವಿಧಾಸಭೆ ಚುನಾವಣೆಯಲ್ಲಿ ಜೆಡಿಯು 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಅಧಿಕಾರ ಉಳಿಸಿಕೊಂಡಿದೆ. ಈ ವೇಳೆ, ಜೆಡಿಯು ಶಾಸಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಕೆ.ಎಚ್. ಜೋಯ್ಕಿಶನ್, ಎನ್.ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್ ಎಂ ಖೌಟೆ ಮತ್ತು ತಂಗಜಮ್ ಅರುಣ್​ಕುಮಾರ್ ಬಿಜೆಪಿ ಸೇರ್ಪಡೆಯಾಗಿರುವ ಶಾಸಕರಾಗಿದ್ದಾರೆ. ಇನ್ನು, ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮುರಿದು ಬಿದ್ದ ಬೆನ್ನಲ್ಲೇ ಮಣಿಪುರದಲ್ಲೂ ಜೆಡಿಯು ಶಾಸಕರು ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್​ ಪಡೆದುಕೊಳ್ಳುತ್ತಾರೆಂಬ ಮಾತು ಕೇಳಿ ಬರಲು ಶುರುವಾಗಿತ್ತು. ಆದರೆ, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿಗೆ ಶಾಕ್​ ನೀಡಿರುವ ಶಾಸಕರು, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಣಿಪುರದಲ್ಲಿ ಸದ್ಯ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com