ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾಗಲು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ; ಗೆಹ್ಲೋಟ್ ಭೇಟಿಯಾದ ತರೂರ್!
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಇಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಪಕ್ಷದ ಭವಿಷ್ಯ ಹಾಗೂ ಮುಂಬರುವ ಎಐಸಿಸಿ ಅಧ್ಯಕ್ಷ ಚುನಾವಣೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published: 05th September 2022 12:17 PM | Last Updated: 05th September 2022 02:44 PM | A+A A-

ರಾಮಲೀಲಾ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಇಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಪಕ್ಷದ ಭವಿಷ್ಯ ಹಾಗೂ ಮುಂಬರುವ ಎಐಸಿಸಿ ಅಧ್ಯಕ್ಷ ಚುನಾವಣೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಉಭಯ ನಾಯಕರು ನಿರೀಕ್ಷಿತ ಆಕಾಂಕ್ಷಿಗಳಾಗಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಇಬ್ಬರು ನಾಯಕರು ಪಕ್ಷದ ಭವಿಷ್ಯದ ಬಗ್ಗೆ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಮುಂಬರುವ ಚುನಾವಣೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಬಗ್ಗೆ ಇದ್ದ ವರದಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದರು ಮತ್ತು ಪಕ್ಷದ ಅಧ್ಯಕ್ಷ ಸ್ಥಾನವನ್ನು ಮತ್ತೆ ವಹಿಸಿಕೊಳ್ಳಲು ರಾಹುಲ್ ಗಾಂಧಿಯವರ ಮನವೊಲಿಸಲು ಕೊನೆ ಕ್ಷಣದವರೆಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ಹೆಚ್ಚಾಗುತ್ತಿದೆ: ಕಾಂಗ್ರೆಸ್ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಚುನಾವಣಾ ಅಧಿಸೂಚನೆ ಹೊರಬಿದ್ದ ನಂತರವೇ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ತಾನು ಕಣಕ್ಕೆ ಇಳಿಯಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ತರೂರ್ ಹೇಳಿದ್ದಾರೆ.
ಇಲ್ಲಿನ ರಾಮಲೀಲಾ ಮೈದಾನದಲ್ಲಿ ಪಕ್ಷದ 'ಮೆಹೆಂಗೈ ಪರ್ ಹಲ್ಲಾ ಬೋಲ್' ರ‍್ಯಾಲಿಯಲ್ಲಿ ಗೆಹ್ಲೋಟ್ ಮತ್ತು ತರೂರ್ ಇಬ್ಬರೂ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಗೆಹ್ಲೋಟ್, 'ಬಿಜೆಪಿಯಲ್ಲಿರುವ ಜನರು ಫ್ಯಾಸಿಸ್ಟರು, ಅವರು ಪ್ರಜಾಪ್ರಭುತ್ವದ ಮುಖವಾಡವನ್ನು ಮಾತ್ರ ಧರಿಸಿದ್ದಾರೆ. ಇಡೀ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ, ಸಂವಿಧಾನ ನಾಶವಾಗುತ್ತಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಯುಪಿಎ ಆಡಳಿತವಿರುವಾಗ ತಾವು ಹೇಳಿದ್ದ ಮಾತುಗಳನ್ನು ಮೋದಿ ಮರೆತಿದ್ದಾರೆ' ಎಂದು ದೂರಿದರು.
'ಗಾಂಧಿಗಳ ವಿಶ್ವಾಸಾರ್ಹತೆ ಅತ್ಯುನ್ನತವಾಗಿದೆ ಮತ್ತು ನಿಮ್ಮ (ಮೋದಿ) ಗಿಂತ ಹೆಚ್ಚಿನದಾಗಿದೆ. ಏಕೆಂದರೆ, ಗಾಂಧಿ ಕುಟುಂಬದಲ್ಲಿ ಯಾರೊಬ್ಬರೂ ಪ್ರಧಾನಿಯಾಗಿರುವುದು ಸೇರಿದಂತೆ ಸರ್ಕಾರದಲ್ಲಿ ಯಾವುದೇ ಸ್ಥಾನವನ್ನು ಹೊಂದಿಲ್ಲ. ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರದ ವಾತಾವರಣವಿದೆ ಮತ್ತು ಹೀಗಾಗಿ ಜನರನ್ನು ಒಗ್ಗೂಡಿಸುವ ಅಗತ್ಯವಿದೆ. ಅದಕ್ಕಾಗಿ 'ಭಾರತ್ ಜೋಡೋ ಯಾತ್ರೆ' ನಡೆಯಲಿದೆ' ಎಂದು ಗೆಹ್ಲೋಟ್ ಹೇಳಿದರು.
A strong speech by @RahulGandhi at @INCIndia’s #MehengaiParHallaBol rally roused the huge crowds thronging the Ram Lila Maidan. Now to take the message across the country in the #BharatJodoYatra! pic.twitter.com/Y6gXGlDLIt
— Shashi Tharoor (@ShashiTharoor) September 4, 2022
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಚಿಂತನೆ ನಡೆಸುತ್ತಿರುವ ತರೂರ್ ಟ್ವೀಟ್ ಮಾಡಿ, ಇಲ್ಲಿ ನಡೆದ ಪಕ್ಷದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿಯವರು ಮಾಡಿದ 'ಬಲವಾದ ಭಾಷಣ'ವನ್ನು ಶ್ಲಾಘಿಸಿದರು ಮತ್ತು ರಾಮಲೀಲಾ ಮೈದಾನದಲ್ಲಿ ಭಾರಿ ಜನಸಮೂಹ ನೆರೆದಿರುವುದನ್ನು ಗಮನಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಯೋಚನೆ, ಶೀಘ್ರದಲ್ಲೇ ಅಂತಿಮ ನಿರ್ಧಾರ: ಮೂಲಗಳು
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್ 22ರಂದು ಅಧಿಸೂಚನೆ ಹೊರಬೀಳಲಿದ್ದು, ಸೆಪ್ಟೆಂಬರ್ 24ರಿಂದ 30ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದ್ದು, ಅಗತ್ಯ ಬಿದ್ದರೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಫಲಿತಾಂಶ ಹೊರಬೀಳಲಿದೆ.
ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಧ್ವನಿ ಎತ್ತಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರಾಮಲೀಲಾ ಮೈದಾನವನ್ನು ತಲುಪಿದಾಗ ಭಾನುವಾರ 'ರಾಹುಲ್ ಗಾಂಧಿಯನ್ನು ಐಎನ್‌ಸಿ ಅಧ್ಯಕ್ಷರನ್ನಾಗಿ ಮಾಡಿ' ಎಂಬ ಘೋಷಣೆಗಳು ಮೊಳಗಿದವು. ಹಲವು ಪಕ್ಷದ ಕಾರ್ಯಕರ್ತರು ರಾಹುಲ್ ಮತ್ತೊಮ್ಮೆ ಪಕ್ಷವನ್ನು ಮುನ್ನಡೆಸುವಂತೆ ಬ್ಯಾನರ್‌ಗಳನ್ನು ಹಾಕಿದ್ದರು.
ಬಿಸಿಲಿನ ಝಳವನ್ನು ಲೆಕ್ಕಿಸದೆ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ರ‍್ಯಾಲಿಯಲ್ಲಿ ಭಾಗವಹಿಸಿ ಅಗತ್ಯ ವಸ್ತುಗಳ 'ಗಗನಕ್ಕೇರುತ್ತಿರುವ' ಬೆಲೆಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿಯವರು ವೇದಿಕೆಗೆ ಬಂದ ಕೂಡಲೇ ನೆರೆದಿದ್ದ ಜನಸಮೂಹ ಚಪ್ಪಾಳೆ ತಟ್ಟಿತು ಮತ್ತು 'ರಾಹುಲ್ ಗಾಂಧಿ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿದರು.