ಭಾರತದಲ್ಲಿ ಶೇ.80 ರಷ್ಟು ಸರ್ಕಾರಿ ಶಾಲೆಗಳು ಕಸದತೊಟ್ಟಿಗಳಂತಿವೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಭಾರತದಲ್ಲಿ ಶೇ.80 ರಷ್ಟು ಸರ್ಕಾರಿ ಶಾಲೆಗಳು ಕಸದತೊಟ್ಟಿಗಳಂತಿವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಭಾರತದಲ್ಲಿ ಶೇ.80 ರಷ್ಟು ಸರ್ಕಾರಿ ಶಾಲೆಗಳು ಕಸದತೊಟ್ಟಿಗಳಂತಿವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ದೇಶದ ಶೇ 80ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಜಂಕ್‌ ಯಾರ್ಡ್‌ಗಳಿಗಿಂತ (ಕಸ ಹಾಕುವ ಜಾಗ) ಕೆಟ್ಟದಾಗಿವೆ ಎಂದು ಆರೋಪಿಸಿದ್ದಾರೆ.

14,500 ಶಾಲೆಗಳನ್ನು ಆಧುನೀಕರಿಸುವ ಪ್ರಧಾನ ಮಂತ್ರಿಯ ನಿರ್ಧಾರವನ್ನು "ಸಾಗರದ ನೀರಿನ ಹನಿ" ಎಂದು ಬಣ್ಣಿಸಿದ ಅವರು ದೇಶದ ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಮತ್ತೊಮ್ಮೆ ಒತ್ತಾಯಿಸಿದರು.

 "ಭಾರತದಲ್ಲಿ ಪ್ರತಿದಿನ 27 ಕೋಟಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಾರೆ, ಅದರಲ್ಲಿ 18 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ. ಆದರೆ ಚಿಂತಾಜನಕವೆಂದರೆ ಶೇ.80 ರಷ್ಟು ಸರ್ಕಾರಿ ಶಾಲೆಗಳ ಸ್ಥಿತಿ ಜಂಕ್‌ ಯಾರ್ಡ್‌ಗಿಂತ ಕೆಟ್ಟದಾಗಿದೆ. ನಾವು ನಮ್ಮ ಕೋಟಿಗಟ್ಟಲೆ ಮಕ್ಕಳಿಗೆ ಅಂತಹ ಶಿಕ್ಷಣವನ್ನು ನೀಡುತ್ತಿದ್ದರೆ, ದೇಶವು ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಊಹಿಸಿಕೊಳ್ಳಿ ಎಂದು ಕೇಜ್ರಿವಾಲ್ ಅವರು ಹಿಂದಿಯಲ್ಲಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 "ನೀವು 14,500 ಶಾಲೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದೀರಿ.. ಆದರೆ ನಾವು ಈ ವೇಗದಲ್ಲಿ ಕೆಲಸ ಮಾಡಿದರೆ, ನಮ್ಮ ಎಲ್ಲಾ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು 100 ವರ್ಷಗಳು ಬೇಕಾಗುತ್ತದೆ. ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳ ಪುನರಾಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸುವಂತೆ ನಾನು ವಿನಂತಿಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ದೇಶದ 10 ಲಕ್ಷ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಮೋದಿ ಅವರು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚಿಸಿ ಯೋಜನೆಯನ್ನು ಸಿದ್ಧಪಡಿಸಬೇಕು. ಪ್ರತಿ ಮಗುವಿಗೆ ಉಚಿತ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸದೆ ಭಾರತವು ವಿಶ್ವದ ನಂಬರ್ ಒನ್ ದೇಶವಾಗಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

 'ಪಿಎಂ-ಶ್ರೀ ಯೋಜನೆ' ಅಡಿಯಲ್ಲಿ ದೇಶಾದ್ಯಂತ 14,500 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಮೇಲ್ದರ್ಜೆಗೇರಿಸಲಾಗುವುದು ಎಂದು ಸೋಮವಾರ ಮೋದಿ ಘೋಷಿಸಿದರು. ಲ್ಯಾಬ್‌ಗಳು, ಸ್ಮಾರ್ಟ್ ತರಗತಿಗಳು, ಗ್ರಂಥಾಲಯಗಳು ಮತ್ತು ಕ್ರೀಡಾ ಸೌಲಭ್ಯಗಳು ಸೇರಿದಂತೆ ಆಧುನಿಕ ಮೂಲಸೌಕರ್ಯಗಳನ್ನು ಅವುಗಳೊಂದಿಗೆ ಸಜ್ಜುಗೊಳಿಸಲಾಗುವುದು ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com