ರಾಬರ್ಟ್ ವಾದ್ರಾ ಇರುವ ಪೋಸ್ಟರ್‌: ಕಾಂಗ್ರೆಸ್ ನ 'ಪರಿವಾರ್ ಜೋಡೋ' ಎಂದು ಬಿಜೆಪಿ ಟೀಕೆ

ರಾಬರ್ಟ್ ವಾದ್ರಾ ಹಂಚಿಕೊಂಡ ಪೋಸ್ಟರ್ ವಿರುದ್ಧ ಕಿಡಿಕಾರಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ್ ಜೋಡೋ ಯಾತ್ರೆ ನಿಜವಾಗಿಯೂ 'ಪರಿವಾರ ಜೋಡೋ' ಎಂದು ಹೇಳಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ

ನವದೆಹಲಿ: ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ ದೊರೆಯಲಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು, ಗಾಂಧಿ ಕುಟುಂಬ ಸೇರಿದಂತೆ ಇತರೆ ನಾಯಕರೊಂದಿಗೆ ತಮ್ಮದು ಫೋಟೊ ಇರುವ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಈ ವೇಳೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ್ ಜೋಡೋ ಯಾತ್ರೆ ನಿಜವಾಗಿಯೂ 'ಪರಿವಾರ ಜೋಡೋ' ಎಂದು ಹೇಳಿದೆ.

'ಭಾರತ್ ಜೋಡೋ' ಎಂದು ರಾಬರ್ಟ್ ವಾದ್ರಾ ಭಾರತೀಯ ತ್ರಿವರ್ಣ ಧ್ವಜದ ಎಮೋಜಿಯೊಂದಿಗೆ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ ಮೂಲಕ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರನ್ನು ಒಳಗೊಂಡ ಪೋಸ್ಟರ್‌ಗಳನ್ನು ಅಂಟಿಸುತ್ತಿರುವ ದೃಶ್ಯ ಕಂಡುಬಂದಿದೆ.

ಈ ಪೋಸ್ಟರ್‌ಗಳ ಬಗ್ಗೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಶೆಹಜಾದ್ ಪೂನವಾಲ, 'ಕಾಂಗ್ರೆಸ್‌ನ ಭಾರತ್ ಜೋಡೋ ವಾಸ್ತವವಾಗಿ ಪರಿವಾರ ಜೋಡೋ ಮತ್ತು ಬ್ರಷ್ಟಾಚಾರ ಜೋಡೋ ಮಾತ್ರ. ನಿಮಗೆ ಯಾವುದೇ ಅನುಮಾನಗಳಿದ್ದರೆ ಇಲ್ಲಿಗೆ ಹೋಗಿ' ಎಂದು ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ ನಂತರ ಈ ವರ್ಷದ ಜೂನ್‌ನಲ್ಲಿ, ರಾಬರ್ಟ್ ವಾದ್ರಾ ಅವರು ರಾಜಕೀಯಕ್ಕೆ ಪ್ರವೇಶಿಸುವ ಚಿಂತನೆಯಲ್ಲಿರುವುದಾಗಿ ಸುಳಿವು ನೀಡಿದ್ದರು.

'ಈ ರಾಷ್ಟ್ರದಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ದೇಶದಲ್ಲಿ ಅಗತ್ಯವಿರುವ ಬದಲಾವಣೆಯನ್ನು ನಾನು ತರಬಲ್ಲೆ ಎಂದು ಜನರು ಭಾವಿಸಿದರೆ, ನಾನು ರಾಜಕೀಯಕ್ಕೆ ಪ್ರವೇಶಿಸುತ್ತೇನೆ' ಎಂದು ರಾಬರ್ಟ್ ವಾದ್ರಾ ಇಂಡಿಯಾ ಟುಡೇಗೆ ತಿಳಿಸಿದ್ದರು.

ಕನ್ಯಾಕುಮಾರಿಯಿಂದ 3,570 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಯಾತ್ರೆಯು 12 ರಾಜ್ಯಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com