ಬೇಕಿದ್ದರೆ ಮೋದಿ ಫೋಟೋ ಹಾಕುತ್ತೇವೆ: ಅದು ಎಲ್ಲಿ ಗೊತ್ತಾ? ನಿರ್ಮಲಾ ಸೀತಾರಾಮನ್ ಗೆ ಕೆಸಿಆರ್ ಪುತ್ರಿ ಟಾಂಗ್

ಪಡಿತರ ಅಂಗಡಿಗಳಲ್ಲಿ ನರೇಂದ್ರ ಮೋದಿ ಅವರ ಫೋಟೋ ಹಾಕುವಂತೆ ಕೇಳಿ ವಿವಾದಕ್ಕೆ ಸಿಲುಕಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ತೆಲಂಗಾಣ ಎಂಎಲ್ ಸಿ ಕೆ ಕವಿತಾ ಇಂದು ವಾಗ್ದಾಳಿ ನಡೆಸಿದ್ದಾರೆ.
ಕೆ ಕವಿತಾ
ಕೆ ಕವಿತಾ

ಹೈದರಾಬಾದ್: ಪಡಿತರ ಅಂಗಡಿಗಳಲ್ಲಿ ನರೇಂದ್ರ ಮೋದಿ ಅವರ ಫೋಟೋ ಹಾಕುವಂತೆ ಕೇಳಿ ವಿವಾದಕ್ಕೆ ಸಿಲುಕಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ತೆಲಂಗಾಣ ಎಂಎಲ್ ಸಿ ಕೆ ಕವಿತಾ ಇಂದು ವಾಗ್ದಾಳಿ ನಡೆಸಿದ್ದಾರೆ. 

ಸೀತಾರಾಮನ್ ಜೀ, ನೀವು ಪ್ರಧಾನಿಯವರ ಚಿತ್ರಗಳನ್ನು ಹಾಕಬೇಕೆಂದು ಬಯಸಿದರೆ, ನಾವು ಖಂಡಿತವಾಗಿಯೂ ಹಾಗೆ ಮಾಡುತ್ತೇವೆ. ಬಿಜೆಪಿಯ ಆಡಳಿತದಲ್ಲಿ ದುಬಾರಿಯಾದ ವಸ್ತುಗಳ ಮೇಲೆ ತಮ್ಮ ಪಕ್ಷವು ಪ್ರಧಾನಿ ಮೋದಿಯವರ ಚಿತ್ರಗಳನ್ನು ಹಾಕುತ್ತದೆ ಎಂದು ತಿರುಗೇಟು ನೀಡಿದರು. ಗ್ಯಾಸ್ ಸಿಲಿಂಡರ್, ಯೂರಿಯಾ ಪ್ಯಾಕೆಟ್, ಪೆಟ್ರೋಲ್, ಡೀಸೆಲ್ ಬಂಕ್, ಆಯಿಲ್ ಮತ್ತು ದಾಲ್ ಪ್ಯಾಕೆಟ್ ಮೇಲೆ ಮೋದಿಯವರ ಫೋಟೋ ಹಾಕುತ್ತೇವೆ. ಎಲ್ಲೆಲ್ಲಿ ವೆಚ್ಚ ಹೆಚ್ಚುತ್ತಿದೆಯೋ ಅಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಹಾಕುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಸಿಆರ್ ಸರ್ಕಾರದ ಪ್ರಮುಖ ಯೋಜನೆಯಡಿ ಫಲಾನುಭವಿಗಳಿಗೆ ಆಸರಾ ಯೋಜನೆಯ ಪಿಂಚಣಿ ವಿತರಣಾ ಸಮಾರಂಭದಲ್ಲಿ ಪಿಂಚಣಿ ವಿತರಿಸಿ ಮಾತನಾಡಿದ ಅವರು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಕುವಂತೆ ಸೂಚಿಸಿದ್ದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಬಂದದ್ದು ಒಳ್ಳೆಯದು. ಅತಿಥಿಗಳನ್ನು ಸ್ವೀಕರಿಸಲು ನಾವು ಸಂತೋಷಪಡುತ್ತೇವೆ. ಆದರೆ ಅವರು ಪಡಿತರ ಅಂಗಡಿಗೆ ಹೋಗಿ ಪ್ರಧಾನಿಯವರ ಚಿತ್ರಗಳನ್ನು ಹಾಕದಿರುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಜಗಳವಾಡಿದರು. ನ್ಯಾಯಬೆಲೆ ಅಂಗಡಿಗಳ ಹೊರಗೆ ಪ್ರಧಾನಿಗಳ ಚಿತ್ರಗಳನ್ನು ಎಂದಿಗೂ ಹಾಕಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ನೆಹರೂ ಕಾಲದಲ್ಲಷ್ಟೇ ಅಲ್ಲ, ಮನಮೋಹನ್ ಸಿಂಗ್ ಅಥವಾ ವಾಜಪೇಯಿ ಅವರ ಕಾಲದಲ್ಲೂ ಪ್ರಧಾನಿ ಚಿತ್ರಗಳನ್ನು ಯಾರೂ ಹಾಕಿರಲಿಲ್ಲ ಎಂದು ಅವರು ಹೇಳಿದರು.

ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜಾಗುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟು ಎಂಬುದಕ್ಕೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಸೀತಾರಾಮನ್ ಛೀಮಾರಿ ಹಾಕಿದ್ದರು. ಬೀರ್ಕೂರಿನ ಪಿಡಿಎಸ್ ಪಡಿತರ ಅಂಗಡಿಯೊಂದರ ಪರಿಶೀಲನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಏಕೆ ಕಾಣೆಯಾಗಿದೆ ಎಂದು ಕೇಂದ್ರ ಸಚಿವರು ಜಿಲ್ಲಾಧಿಕಾರಿಯನ್ನು ಕೇಳಿದ್ದರು.

ಟಿಆರ್‌ಎಸ್ ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಪ್ರಧಾನಿ ಮೋದಿಯವರ ಫೋಟೋವನ್ನು ಅಂಟಿಸಿ ಏರುತ್ತಿರುವ ಬೆಲೆಗಳ ಬಗ್ಗೆ ಪರೋಕ್ಷವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗೇಟು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com