ಒಂದನೇ ವರ್ಷಕ್ಕೆ ಮದುವೆಯಾಗಿದ್ದ ರಾಜಸ್ಥಾನದ ರೇಖಾಳ ಬಾಲ್ಯ ವಿವಾಹ 20 ವರ್ಷಗಳ ನಂತರ ರದ್ದು

ಕೇವಲ ಒಂದು ವರ್ಷದಲ್ಲಿದ್ದಾಗ ಬಾಲ್ಯ ವಿವಾಹದ ಸಂಕೋಲೆಯಲ್ಲಿ ಸಿಲುಕಿ 20 ವರ್ಷಗಳ ನಿರಂತರ ಹೋರಾಟದ ನಂತರ ರಾಜಸ್ಥಾನದ ರೇಖಾಗೆ ಗುರುವಾರ ತನ್ನ ಜನ್ಮದಿನದಂದೇ ಬಾಲ್ಯ ವಿವಾಹದಿಂದ ಮುಕ್ತಿ ಸಿಕ್ಕಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ಕೇವಲ ಒಂದು ವರ್ಷದಲ್ಲಿದ್ದಾಗ ಬಾಲ್ಯ ವಿವಾಹದ ಸಂಕೋಲೆಯಲ್ಲಿ ಸಿಲುಕಿ 20 ವರ್ಷಗಳ ನಿರಂತರ ಹೋರಾಟದ ನಂತರ ರಾಜಸ್ಥಾನದ ರೇಖಾಗೆ ಗುರುವಾರ ತನ್ನ ಜನ್ಮದಿನದಂದೇ ಬಾಲ್ಯ ವಿವಾಹದಿಂದ ಮುಕ್ತಿ ಸಿಕ್ಕಿದೆ. 

ಸಾರಥಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞ ಡಾ. ಕೃತಿ ಭಾರ್ತಿ ಅವರ ಬೆಂಬಲದೊಂದಿಗೆ ರೇಖಾ ತನ್ನ ಬಾಲ್ಯ ವಿವಾಹದಿಂದ ಹೊರಬರಲು ಕೌಟುಂಬಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದರು.

ತನ್ನ ಬಾಲ್ಯ ವಿವಾಹ ರದ್ದು ಕೋರಿ ರೇಖಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜೋಧ್‌ಪುರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪ್ರದೀಪ್ ಕುಮಾರ್ ಮೋದಿ ಅವರು, ರೇಖಾ ಅವರ ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಐತಿಹಾಸಿಕ ತೀರ್ಪು ನೀಡಿದ್ದಾರೆ. ಈ ಮೂಲಕ ಬಾಲ್ಯವಿವಾಹದ ಅನಿಷ್ಟ ಪದ್ದತಿ ವಿರುದ್ಧ ಬಲವಾದ ಸಂದೇಶ ರವಾನಿಸಿದ್ದಾರೆ.

ಜೋಧ್‌ಪುರದ ನಿವಾಸಿಯಾಗಿರುವ 21 ವರ್ಷದ ರೇಖಾ 2002ರಲ್ಲಿ ಅದೇ ಪಟ್ಟಣದ ಹಳ್ಳಿಯೊಂದರ ಯುವಕನೊಂದಿಗೆ ಬಾಲ್ಯವಿವಾಹದ ಕಪಿಮುಷ್ಠಿಯಲ್ಲಿ ಸಿಲುಕಿದ್ದರು. ವಿವಾಹದ ಸಮಯದಲ್ಲಿ ರೇಖಾಗೆ ಕೇವಲ ಒಂದು ವರ್ಷವಾಗಿತ್ತು. ಆಕೆ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅವಳ ಅತ್ತೆಯ ಮನೆಗೆ ಕಳುಹಿಸಲು ಒತ್ತಡ ಹೇರಿದ್ದರು. ಇದರಿಂದ ರೇಖಾ ಅವರ ಎಎನ್‌ಎಂ(ನರ್ಸ್ ಕೋರ್ಸ್) ಮಾಡುವ ಕನಸು ಭಗ್ನಗೊಂಡು ಖಿನ್ನತೆಗೆ ಒಳಗಾಗಿದ್ದರು.

ಏತನ್ಮಧ್ಯೆ, ಪ್ರಸಿದ್ಧ ಕಾರ್ಯಕರ್ತೆ ಮತ್ತು ಬಿಬಿಸಿ 100 ಸ್ಪೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಕೀರ್ತಿ ಅವರ ಬಾಲ್ಯ ವಿವಾಹವನ್ನು ರದ್ದುಗೊಳಿಸುವ ಅಭಿಯಾನದ ಬಗ್ಗೆ ರೇಖಾ ತಿಳಿದುಕೊಂಡರು. ರೇಖಾ ಅವರು ಸಾರಥಿ ಟ್ರಸ್ಟ್‌ನ ಡಾ. ಕೃತಿ ಭಾರ್ತಿ ಅವರ ಸಹಾಯದಿಂದ ಜೋಧ್‌ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಬಾಲ್ಯ ವಿವಾಹವನ್ನು ರದ್ದುಗೊಳಿಸುವಂತೆ ಮೊಕದ್ದಮೆ ಹೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com