ಸಿಎಂ, ಕೇಂದ್ರ ಸಚಿವ ಸ್ಥಾನದಿಂದ ಕೈಬಿಟ್ಟವರಿಗೆ ಪಕ್ಷದ ಜವಾಬ್ದಾರಿ ನೀಡಿದ ಬಿಜೆಪಿ
ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು 2024 ರ ಲೋಕಸಭೆ ಚುನಾವಣೆಯ ಮೇಲೆ ಕೇಂದ್ರೀಕರಿಸಿದ ಬಿಜೆಪಿ ಶುಕ್ರವಾರ ಮುಖ್ಯಮಂತ್ರಿ ಸ್ಥಾನ ಮತ್ತು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಂಡ ನಾಯಕರಿಗೆ ಹೊಸ ಜವಾಬ್ದಾರಿಗಳನ್ನು
Published: 09th September 2022 10:01 PM | Last Updated: 09th September 2022 10:01 PM | A+A A-

ಜೆ.ಪಿ ನಡ್ಡಾ
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು 2024 ರ ಲೋಕಸಭೆ ಚುನಾವಣೆಯ ಮೇಲೆ ಕೇಂದ್ರೀಕರಿಸಿದ ಬಿಜೆಪಿ ಶುಕ್ರವಾರ ಮುಖ್ಯಮಂತ್ರಿ ಸ್ಥಾನ ಮತ್ತು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಂಡ ನಾಯಕರಿಗೆ ಹೊಸ ಜವಾಬ್ದಾರಿಗಳನ್ನು ಪ್ರಕಟಿಸಿದೆ.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಮಾಜಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ಮಹೇಶ್ ಶರ್ಮಾ ಅವರಿಗೆ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ.
ಇದನ್ನು ಓದಿ: ರಾಹುಲ್ ಗಾಂಧಿ ಟೀ ಶರ್ಟ್ ಮೇಲೆ ಬಿಜೆಪಿ ಕೆಂಗಣ್ಣು; ಮೋದಿ ಸೂಟ್ ಬೆಲೆ 10 ಲಕ್ಷ - ಕಾಂಗ್ರೆಸ್ ತಿರುಗೇಟು
ವಿಜಯ್ ರೂಪಾನಿ ಅವರಿಗೆ ಪಂಜಾಬ್ ಉಸ್ತುವಾರಿ ನೀಡಲಾಗಿದ್ದು, ಬಿಪ್ಲಬ್ ದೇಬ್ ಅವರಿಗೆ ಹರಿಯಾಣದ ಉಸ್ತುವಾರಿ, ಪ್ರಕಾಶ್ ಜಾವಡೇಕರ್ ಅವರಿಗೆ ಕೇರಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಹರಿಯಾಣದ ಉಸ್ತುವಾರಿ ವಹಿಸಿಸಿಕೊಂಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಈಗ ಬಿಹಾರ ಜವಾಬ್ದಾರಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎಂದು ಪರಿಗಣಿಸಲಾದ ಹಿರಿಯ ನಾಯಕ ಓಂ ಮಾಥುರ್ ಅವರ ಮೇಲೆ ಬಿಜೆಪಿ ನಾಯಕತ್ವದ ನಂಬಿಕೆ ಹಾಗೇ ಉಳಿದಿದೆ. ಇತ್ತೀಚೆಗೆ ಪ್ರಬಲ ಕೇಂದ್ರ ಚುನಾವಣಾ ಸಮಿತಿಗೆ ನೇಮಕಗೊಂಡಿರುವ ಮಾಥುರ್ ಅವರು ಮುಂದಿನ ವರ್ಷ ಚುನಾವಣೆ ನಡೆಯಲಿರುವ ಛತ್ತೀಸ್‌ಗಢದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಅವರಿಗೆ ಪಶ್ಚಿಮ ಬಂಗಾಳದ ಉಸ್ತುವಾರಿ ನೀಡಲಾಗಿದೆ.
ರಾಜಸ್ಥಾನದಲ್ಲಿ ಅರುಣ್ ಸಿಂಗ್ ಮತ್ತು ಮಧ್ಯಪ್ರದೇಶದಲ್ಲಿ ಮುರಳೀಧರ್ ರಾವ್ ಅವರಂತಹ ಕೆಲವು ಉಸ್ತುವಾರಿಗಳನ್ನು ಉಳಿಸಿಕೊಳ್ಳಲಾಗಿದೆ. ಲಕ್ಷ್ಮೀಕಾಂತ್ ವಾಜಪೇಯಿ ಅವರು ಜಾರ್ಖಂಡ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ತ್ರಿಪುರವನ್ನು ಮಹೇಶ್ ಶರ್ಮಾ ನೋಡಿಕೊಳ್ಳಲಿದ್ದಾರೆ. ಬಿಜೆಪಿಯ ಪ್ರಮುಖ ನಾಯಕ ಸಂಬಿತ್ ಪಾತ್ರ ಅವರು ಈಶಾನ್ಯ ರಾಜ್ಯಗಳ ಸಂಯೋಜಕರಾಗಿರುತ್ತಾರೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಜಂಟಿ ಸಂಯೋಜಕರಾಗಿರುತ್ತಾರೆ.