ಹಾಥರಸ್ ಸಂಚು ಪ್ರಕರಣ: ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹಾಥರಸ್‌ಗೆ ತೆರಳುತ್ತಿದ್ದಾಗ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
ಪತ್ರಕರ್ತ ಸಿದ್ದಿಕಿ ಕಪ್ಪನ್
ಪತ್ರಕರ್ತ ಸಿದ್ದಿಕಿ ಕಪ್ಪನ್

ನವದೆಹಲಿ: 2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹಾಥರಸ್‌ಗೆ ತೆರಳುತ್ತಿದ್ದಾಗ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು, ಜಾಮೀನು ನೀಡಿದ್ದು, ಉತ್ತರ ಪ್ರದೇಶದ ಜೈಲಿನಿಂದ ಬಿಡುಗಡೆಯಾದ ನಂತರ ಮುಂದಿನ ಆರು ವಾರಗಳ ಕಾಲ ದೆಹಲಿಯಲ್ಲೇ ಇರುವಂತೆ ಕಪ್ಪನ್ ಅವರಿಗೆ ಸೂಚಿಸಿದೆ.

ಅಲ್ಲದೆ, ಅವರಿಗೆ ಪಾಸ್‌ಪೋರ್ಟ್ ಒಪ್ಪಿಸುವಂತೆ ಮತ್ತು ಪ್ರತಿ ಸೋಮವಾರದಂದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಕೇಳುವುದು ಸೇರಿದಂತೆ ಕೆಲವು ಷರತ್ತುಗಳನ್ನು ಪೀಠ ವಿಧಿಸಿದೆ.

ಕೇರಳ ಮೂಲದ ಪತ್ರಕರ್ತರು ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತಂತೆ ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕೇಳಿತ್ತು.

'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಚಟುವಟಿಕೆಗಳನ್ನು ಪ್ರಚಾರ ಮಾಡಲು ಸಿದ್ದಿಕಿ ಪತ್ರಿಕೋದ್ಯಮ ಬಳಸಿಕೊಂಡಿದ್ದಾರೆ. ಆರೋಪಿಯು ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವಲ್ಲಿ ಮಾಸ್ಟರ್‌ ಮೈಂಡ್‌ ಆಗಿದ್ದಾನೆ. ಆರೋಪಿ ತಮ್ಮ ಮೊಬೈಲ್‌ನಿಂದ ಕರೆ ಪಟ್ಟಿ, ಚಾಟ್‌ಗಳನ್ನು ಡಿಲೀಟ್ ಮಾಡಿದ್ದು, ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದು' ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

ಆಪಾದಿತ ಹಾಥರಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೂರಿ ನಡೆಸಿದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ದಾಖಲಾಗಿರುವ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಈ ತಿಂಗಳ ಆರಂಭದಲ್ಲಿ ತಿರಸ್ಕರಿಸಿತ್ತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಪರ್ಕ ಹೊಂದಿರುವ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಹಿಂದೆ ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಧನಸಹಾಯ ಮಾಡಿದ ಆರೋಪವನ್ನು ಪಿಎಫ್‌ಐ ಎದುರಿಸಿತ್ತು.

ಆರೋಪಿಯು ಹಾಥರಸ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದ ಎಂದು ಪೊಲೀಸರು ಈ ಹಿಂದೆ ಹೇಳಿಕೊಂಡಿದ್ದರು.

2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನ ಸಾಮೂಹಿಕ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆಯ ಮೇಲೆ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು 'ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ(ಯುಎಪಿಎ)' ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಮೇಲ್ವರ್ಗಕ್ಕೆ ಸೇರಿದ್ದ ನಾಲ್ವರು ಯುವಕರು ಸೆಪ್ಟೆಂಬರ್‌ 14ರಂದು 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ನವದೆಹಲಿಯ ಸಫ್ದಾರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಯುವತಿಯ ಅಂತ್ಯಕ್ರಿಯೆಯನ್ನು ರಾತ್ರೋ ರಾತ್ರಿ ನೆರವೇರಿಸಿದ್ದ ಉತ್ತರ ಪ್ರದೇಶ ಪೊಲೀಸರ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com