ತಲೆಗೆ 15 ಲಕ್ಷ ಬಹುಮಾನ ಹೊತ್ತಿದ್ದ ಜಾರ್ಖಂಡ್ ಮಾವೋವಾದಿ ನಾಯಕನನ್ನು ಬಂಧಿಸಿದ ಮಹಾ ಎಟಿಎಸ್

ಜಾರ್ಖಂಡ್ ನ ಮಾವೋವಾದಿ ನಾಯಕನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾನುವಾರ ಪಾಲ್ಘರ್ ಜಿಲ್ಲೆಯಿಂದ ಬಂಧಿಸಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜಾರ್ಖಂಡ್ ನ ಮಾವೋವಾದಿ ನಾಯಕನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾನುವಾರ ಪಾಲ್ಘರ್ ಜಿಲ್ಲೆಯಿಂದ ಬಂಧಿಸಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಕ್ಸಲ್ ನಾಯಕನ ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಜಾರ್ಖಂಡ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಬಂಧಿತ ನಕ್ಸಲ್ ನಾಯಕನ ಹೆಸರನ್ನು ದೀಪಕ್ ಯಾದವ್ ಅಲಿಯಾಸ್ ಕರು ಹುಲಾಸ್ ಯಾದವ್ --- 'ಮೋಸ್ಟ್ ವಾಂಟೆಡ್ ನಕ್ಸಲ್' ಪಟ್ಟಿಯಲ್ಲಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್‌ನಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಪ್ರಾದೇಶಿಕ ಸಮಿತಿ ಸದಸ್ಯ ಯಾದವ್(45) ವೈದ್ಯಕೀಯ ಚಿಕಿತ್ಸೆಗಾಗಿ ಮಹಾರಾಷ್ಟ್ರಕ್ಕೆ ಬಂದಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ರಾಜ್ಯ ರಾಜಧಾನಿ ಮುಂಬೈನಿಂದ 50 ಕಿಮೀ ದೂರದಲ್ಲಿರುವ ಪಾಲ್ಘರ್‌ನ ನಲಸೋಪಾರಾ ಪ್ರದೇಶದ ಚಾಲ್ (ವಠಾರ) ಮೇಲೆ ದಾಳಿ ನಡೆಸಿ ನಕ್ಸಲ್ ನಾಯಕನನ್ನು ಬಂಧಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮಹಾರಾಷ್ಟ್ರ ಎಟಿಎಸ್‌ನ ಥಾಣೆ ಘಟಕವು ಯಾದವ್ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ ದಾಳಿ ನಡೆಸಿ ಅವರನ್ನು ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನಕ್ಸಲ್ ನಾಯಕ ಯಾದವ್ ರನ್ನು ಜಾರ್ಖಂಡ್ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com