ಬಲವಂತವಾಗಿ ಗಡ್ಡ ಬೋಳಿಸಿದ್ದಾರೆ; ಮಧ್ಯ ಪ್ರದೇಶದ ಜೈಲು ಅಧಿಕಾರಿಗಳ ವಿರುದ್ಧ ಮುಸ್ಲಿಂ ಕೈದಿಗಳ ಆರೋಪ

ರಾಜಗಢ ಜಿಲ್ಲಾ ಕಾರಾಗೃಹದ ಅಧಿಕಾರಿಯೊಬ್ಬರು ಗಡ್ಡ ಬೋಳಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಐವರು ಮುಸ್ಲಿಂ ಕೈದಿಗಳು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಧ್ಯ ಪ್ರದೇಶದ ಹಿರಿಯ ಜೈಲು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಭೊಪಾಲ್: ರಾಜಗಢ ಜಿಲ್ಲಾ ಕಾರಾಗೃಹದ ಅಧಿಕಾರಿಯೊಬ್ಬರು ಗಡ್ಡ ಬೋಳಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಐವರು ಮುಸ್ಲಿಂ ಕೈದಿಗಳು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಧ್ಯ ಪ್ರದೇಶದ ಹಿರಿಯ ಜೈಲು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕಲೀಂ ಖಾನ್‌, ತಾಲಿಬ್‌ ಖಾನ್‌, ಆರೀಫ್ ಖಾನ್‌, ಸಲ್ಮಾನ್‌ ಖಾನ್‌ ಅಲಿಯಾಸ್ ಭೋಲಾ ಮತ್ತು ವಾಹಿದ್‌ ಖಾನ್‌ ಎಂಬುವವರನ್ನು ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಆರೋಪದಡಿ ಸೆಪ್ಟೆಂಬರ್‌ 13ರಂದು  ಬಂಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಸೆಪ್ಟೆಂಬರ್‌ 15ರಂದು ಇವರು ಜೈಲಿನಿಂದ ಬಿಡುಗಡೆಯಾಗಿದ್ದರು.

ಮಂಗಳವಾರ ಭೊಪಾಲ್ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಅವರು, ಐವರು ವ್ಯಕ್ತಿಗಳೊಂದಿಗೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಭೇಟಿಯಾದರು. ಐವರನ್ನು ಗಡ್ಡ ಬೋಳಿಸುವಂತೆ ಜೈಲು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಅಲ್ಲದೆ, ಜೈಲಿನಲ್ಲಿಯೂ ಇವರ ಮೇಲೆ ದೌರ್ಜನ್ಯ ನಡೆದಿದೆ. ಹೀಗಾಗಿ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಸೂದ್ ಒತ್ತಾಯಿಸಿದ್ದಾರೆ.

ರಾಜಗಢ ಜಿಲ್ಲಾ ಕಾರಾಗೃಹದ ಜೈಲರ್ ಎಸ್.ಎನ್. ರಾಣಾ, ಕೈದಿಗಳ ಮನವಿ ಮೇರೆಗೆ ಅಧಿಕಾರಿಗಳು ಗಡ್ಡ ಬೋಳಿಸುವ ವ್ಯವಸ್ಥೆ ಮಾಡಿರಬಹುದು. ಅಂತಹ ಪದ್ಧತಿ ಜೈಲಿನಲ್ಲಿ ಹಿಂದಿನಿಂದಲೂ ಇದೆ. ಜೈಲಿನಲ್ಲಿರುವ ಪ್ರತಿಯೊಬ್ಬರಿಗೂ ತಮ್ಮ ನಂಬಿಕೆಗೆ ಅನುಗುಣವಾಗಿ ಗಡ್ಡ ಬಿಡುವ, ಕೇಶ ವಿನ್ಯಾಸ ಹೊಂದುವ ಸ್ವಾತಂತ್ರ್ಯ ಇದೆ. ಗಡ್ಡ ಬಿಟ್ಟಿರುವ ಮುಸ್ಲಿಂ ಸಮುದಾಯದ 10 ಮಂದಿ ಕೈದಿಗಳು ಈಗಾಗಲೇ ಜೈಲಿನಲ್ಲಿ ಇದ್ದಾರೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಏನನ್ನೂ ಹೇಳಲಾಗುವುದಿಲ್ಲ ಮತ್ತು ತನಿಖೆ ಪೂರ್ಣಗೊಂಡ ನಂತರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಜೈಲುಗಳ ಉಪ ಮಹಾನಿರೀಕ್ಷಕ (ಡಿಐಜಿ) ಎಂ.ಆರ್. ಪಟೇಲ್ ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟ್ವೀಟ್ ಮಾಡಿದ್ದು, ಐವರನ್ನು ಠಾಣೆಯಲ್ಲಿ ಇರುವಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಿತ್ತು. ಆದರೆ ಅಧಿಕಾರಿಗಳು ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಲಿ ಅವರಿಗೆ ಕಿರುಕುಳ ನೀಡಲಾಗಿದೆ. ಗಡ್ಡ ಬಿಟ್ಟ ಮುಸ್ಲಿಮರನ್ನೆಲ್ಲ ಪಾಕಿಸ್ತಾನದವರೆಂದು ಏಕೆ ಭಾವಿಸುವಿರಿ. ಬಿಜೆಪಿಯ ಹಲವರೂ ಗಡ್ಡ ಬಿಟ್ಟಿದ್ದಾರೆ. ಅವರನ್ನೂ ಹೀಗೆ ಕರೆಯಬಹುದೇ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com