ರಂಗೇರಿದ ರಾಜಸ್ತಾನ ರಾಜಕೀಯ; ಸಿಎಂ ಹುದ್ದೆಗಾಗಿ ಸಚಿನ್ ಪೈಲಟ್ ತೀವ್ರ ಲಾಬಿ; ಗೆಹ್ಲೋಟ್ ಉತ್ತರಾಧಿಕಾರಿ ಯಾರು?

ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಸ್ಥಾನದ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ತಿಳಿಯಲು ಎಲ್ಲರೂ ಈಗ ಉತ್ಸುಕರಾಗಿದ್ದಾರೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ್: ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಸ್ಥಾನದ ಹೊಸ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ತಿಳಿಯಲು ಎಲ್ಲರೂ ಈಗ ಉತ್ಸುಕರಾಗಿದ್ದಾರೆ.

ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಗುರುವಾರ ಕೇರಳದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಗೆಹ್ಲೋಟ್ ಪಕ್ಷದ ಅಧ್ಯಕ್ಷರಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಖಚಿತಪಡಿಸಿದ್ದರು.

ರಾಜಸ್ಥಾನದ ಮುಂದಿನ ಸಿಎಂ ಬಗ್ಗೆ ರಾಜಕೀಯ ರಂಗದಲ್ಲಿ ಕಾವೇರತೊಡಗಿದೆ, ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸಿಎಂ ಕುರ್ಚಿಯ ಮೇಲೆ ತಮ್ಮ ಹಕ್ಕು ಮಂಡಿಸಲು ಆರಂಭಿಸಿದ್ದಾರೆ. ಶುಕ್ರವಾರ ಪೈಲಟ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಅಶೋಕ್ ಗೆಹ್ಲೋಟ್ ಬಣದ ಶಾಸಕರಿಗೂ ಕೂಡ ಅವರು ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ವಿಧಾನಸಭೆಯ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಸಿಪಿ ಜೋಶಿ ಅವರನ್ನು ಭೇಟಿಯಾದರು.

ಆದರೆ, ಪೈಲಟ್‌ಗೆ ಸಿಎಂ ಹುದ್ದೆಯ ರೇಸ್ ಅಷ್ಟೊಂದು ಸುಲಭದ ಮಾತಲ್ಲ. ಏಕೆಂದರೆ ಅಶೋಕ್ ಗೆಹ್ಲೋಟ್  ಪೈಲಟ್ ಅವರು ಸಿಎಂ ಆಗುವುದನ್ನು ಇಷ್ಟಪಡುವುದಿಲ್ಲ ಹೀಗಾಗಿ ಮಾಜಿ ಕೇಂದ್ರ ಸಚಿವ. ಡಾ.ಸಿ.ಪಿ.ಜೋಶಿ ಅವರ ಮೇಲೆ ಗೆಹ್ಲೋಟ್ ಒಲವು ತೋರಿದ್ದು, ಅವರ ಹೆಸರನ್ನೆ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ.  ಗೆಹ್ಲೋಟ್ ಅವರು ಶುಕ್ರವಾರ ತಡರಾತ್ರಿ ಕೇರಳದಿಂದ ಶಿರಡಿ ಮೂಲಕ ಜೈಪುರಕ್ಕೆ ಮರಳಿದ್ದಾರೆ.

ಶುಕ್ರವಾರ ಬೆಳಗ್ಗೆ ಸಚಿನ್ ಪೈಲಟ್ ಅವರು ವಿಧಾನಸಭೆಗೆ ಆಗಮಿಸಿ  ವೇದ ಪ್ರಕಾಶ್ ಸೋಲಂಕಿ, ಇಂದ್ರಜ್ ಗುರ್ಜರ್ ಮತ್ತು ರಾಜೇಶ್ ಪರೀಕ್ ಸೇರಿದಂತೆ ಅವರನ್ನು ಬೆಂಬಲಿಸುವ ಶಾಸಕರನ್ನು ಭೇಟಿ ಮಾಡಿದರು. ಅದಾದ ನಂತರ ಅಶೋಕ್ ಗೆಹ್ಲೋಟ್ ಬೆಂಬಲಿಗರಾದ ಗಿರ್ರಾಜ್ ಮಾಲಿಂಗ ಮತ್ತು ಸ್ವತಂತ್ರ ಶಾಸಕ ಖುಷ್ವೀರ್ ಜೋಜಾವರ್ ಅವರನ್ನು ಭೇಟಿಯಾಗಿ  ಸಚಿನ್ ಪೈಲಟ್ ಚರ್ಚಿಸಿದ್ದಾರೆ.

ಎಲ್ಲಾ ಬಣಗಳ ಕಾಂಗ್ರೆಸ್ ಶಾಸಕರೊಂದಿಗೆ ಪೈಲಟ್ ಮಾತುಕತೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ಕಾಲದಲ್ಲಿ ಅವರ ಕಟ್ಟಾ ವಿರೋಧಿಗಳೆಂದು ಪರಿಗಣಿಸಲ್ಪಟ್ಟ ಶಾಸಕರು ಇವರಲ್ಲಿ ಸೇರಿದ್ದಾರೆ.

ಜೋಶಿ ಮತ್ತು ಪೈಲಟ್ ನಡುವಿನ ಭೇಟಿಯನ್ನು ವಿಶೇಷವಾಗಿ ಬಹಳ ಮಹತ್ವದೆಂದು ಪರಿಗಣಿಸಲಾಗಿದೆ. ಗೆಹ್ಲೋಟ್ ಬದಲಿಗೆ ಮುಂಚೂಣಿಯಲ್ಲಿರುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಉಭಯ ನಾಯಕರ ನಡುವಿನ ಸಂಭಾಷಣೆ ಬಹಿರಂಗವಾಗಿಲ್ಲವಾದರೂ, ರಾಜಸ್ಥಾನದ ಭಾವಿ ಸಿಎಂ ಬಗ್ಗೆ ಅವರ ನಡುವೆ ಒಂದು ಸುತ್ತಿನ ಸಮಾಲೋಚನೆ ನಡೆದಿದೆ ಎಂದು ನಂಬಲಾಗಿದೆ.

ಸದ್ಯಕ್ಕೆ ಶೇ.80 ರಷ್ಟು ಶಾಸಕರು ಗೆಹ್ಲೋಟ್ ಜೊತೆಗಿದ್ದು, ಶೇ.20ರಷ್ಟು ಮಂದಿ ಪೈಲಟ್ ಪರವಾಗಿದ್ದಾರೆ. ಗೆಹ್ಲೋಟ್ ಪಾಳಯದಲ್ಲಿರುವ ಶಾಸಕರನ್ನು ತನ್ನ ಪರವಾಗಿ ಒಲಿಸಿಕೊಳ್ಳಲು ಪೈಲಟ್ ಪ್ರಯತ್ನಿಸುತ್ತಿದ್ದಾರೆ.  ತಮ್ಮ ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ಪ್ರಶ್ನೆಗೆ ಉತ್ತರಿಸಿರುವ ಅಶೋಕ್ ಗೆಹ್ಲೋಟ್, ಈ ಕುರಿತಾದ ಯಾವುದೇ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಮತ್ತು ರಾಜ್ಯದ ಪಕ್ಷದ ವ್ಯವಹಾರಗಳ ಉಸ್ತುವಾರಿ ಅಜಯ್ ಮಾಕನ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com