ನವದೆಹಲಿ: ತನ್ನ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು ತನ್ನದೇ ಆದ ಪ್ಲ್ಯಾಟ್ ಫಾರ್ಮ್ ಅನ್ನು ಹೊಂದಲಿದೆ. ಸದ್ಯ ವಿಚಾರಣೆಗಳ ನೇರ ಪ್ರಸಾರದ ಉದ್ದೇಶಕ್ಕಾಗಿ ಯೂಟ್ಯೂಬ್ ಬಳಕೆ ತಾತ್ಕಾಲಿಕವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸುಪ್ರೀಂ ಕೋರ್ಟ್ ಕಲಾಪಗಳ ಹಕ್ಕುಸ್ವಾಮ್ಯವನ್ನು ಯೂಟ್ಯೂಬ್‌ನಂತಹ ಖಾಸಗಿ ವೇದಿಕೆಗಳಿಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ಮಾಜಿ ನಾಯಕ ಕೆ.ಎನ್ ಗೋವಿಂದಾಚಾರ್ಯ ಅವರ ಪರ ವಕೀಲರು ವಾದಿಸಿದಾಗ, ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಹೀಗೆ ಹೇಳಿದೆ.
ಯೂಟ್ಯೂಬ್ ವೆಬ್‌ಕಾಸ್ಟ್‌ನ ಹಕ್ಕುಸ್ವಾಮ್ಯವನ್ನು ನೀಡುವಂತೆ ಸ್ಪಷ್ಟವಾಗಿ ಕೇಳಿದೆ ಎಂದು ವಕೀಲ ವಿರಾಗ್ ಗುಪ್ತಾ ಅವರು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.
ಇವು ಆರಂಭಿಕ ಹಂತಗಳು. ಖಂಡಿತವಾಗಿಯೂ ನಾವು ನಮ್ಮದೇ ಆದ ಪ್ಲ್ಯಾಟ್ ಫಾರ್ಮ್ ಗಳನ್ನು ಹೊಂದುತ್ತೇವೆ... ಅದನ್ನು (ಹಕ್ಕುಸ್ವಾಮ್ಯ ಸಮಸ್ಯೆ) ನಾವು ನೋಡಿಕೊಳ್ಳುತ್ತೇವೆ ಎಂದು ಸಿಜೆಐ ಹೇಳಿದರು ಮತ್ತು ಗೋವಿಂದಾಚಾರ್ಯ ಅವರ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 17 ಕ್ಕೆ ಮುಂದೂಡಿದರು.
2018ರ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಈ ನ್ಯಾಯಾಲಯದಲ್ಲಿ ದಾಖಲಿಸಲಾದ ಮತ್ತು ಪ್ರಸಾರವಾದ ಎಲ್ಲಾ ವಿಚಾರಣೆಗಳ ಮೇಲಿನ ಹಕ್ಕುಸ್ವಾಮ್ಯವು ಈ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ. YouTube ನ ಬಳಕೆಯ ನಿಯಮಗಳನ್ನು ಉಲ್ಲೇಖಿಸಿದ ಅವರು, ಈ ಖಾಸಗಿ ವೇದಿಕೆಯು ಕೂಡ ಹಕ್ಕುಸ್ವಾಮ್ಯವನ್ನು ಪಡೆಯುತ್ತದೆ ಎಂದು ಹೇಳಿದರು.
ಮುಕ್ತ ನ್ಯಾಯಾಲಯದ ಪರಿಕಲ್ಪನೆ ಬಲಪಡಿಸುವ ಉದ್ದೇಶದಿಂದ ಐದು ನ್ಯಾಯಾಧೀಶರ ಸಂವಿಧಾನ ಪೀಠಗಳಲ್ಲಿ ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸೆ. 27 ರಿಂದ ನೇರ ಪ್ರಸಾರ ಮಾಡಲು ಸೆಪ್ಟೆಂಬರ್ 20ರಂದು ನಡೆದ ಸಿಜೆಐ ನೇತೃತ್ವದ ಪೂರ್ಣ ನ್ಯಾಯಾಲಯದ ಸಭೆಯು ಸರ್ವಾನುಮತದಿಂದ ನಿರ್ಧರಿಸಿದೆ. ಸುಮಾರು ನಾಲ್ಕು ವರ್ಷಗಳ ನಂತರ ಎಲ್ಲಾ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ಲೈವ್-ಸ್ಟ್ರೀಮ್ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಮೊದಲಿಗೆ ಸುಪ್ರೀಂ ಕೋರ್ಟ್, ಯೂಟ್ಯೂಬ್ ಮೂಲಕ ವಿಚಾರಣೆಗಳನ್ನು ನೇರ ಪ್ರಸಾರ ಮಾಡಬಹುದು ಮತ್ತು ನಂತರ ಅವುಗಳನ್ನು ತನ್ನ ಸರ್ವರ್‌ಗಳಲ್ಲಿ ಹೋಸ್ಟ್ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಇದರಿಂದ ಜನರು ತಮ್ಮ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಸುಪ್ರೀಂ ಕೋರ್ಟ್‌ನ ವಿಚಾರಣೆಗಳನ್ನು ನೋಡಲು ಸಾಧ್ಯವಾಗುತ್ತದೆ.
ಆಗಸ್ಟ್ 26ರಂದು, ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠದ ವಿಚಾರಣೆಯನ್ನು ನೇರ ಪ್ರಸಾರ ಮಾಡಿತ್ತು. ಈಗ ಪ್ರಾಯೋಗಿಕವಾಗಿ ಸಾಂವಿಧಾನಿಕ ಪೀಠಗಳ ಎಲ್ಲಾ ಪ್ರಕರಣಗಳ ವಿಚಾರಣೆಗಳ ನೇರ ಪ್ರಸಾರಕ್ಕೆ ಮುಂದಾಗಿದೆ. ಇದು ಸಿಜೆಐ ಎನ್. ವಿ. ರಮಣ ಅವರ ಕೊನೆ ದಿನದ ಅಂಗವಾಗಿ ಔಪಚಾರಿಕ ಪ್ರಕ್ರಿಯೆಯಾಗಿತ್ತು.
ಆ. 27 ರಂದು ಯು.ಯು. ಲಲಿತ್ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಕಿ ಇರುವ ಪ್ರಕರಣಗಳ ವಿಚಾರಣೆಗಾಗಿ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚನೆ ಮಾಡಿದ್ದಾರೆ.
ಸದ್ಯ ಸಾಂವಿಧಾನಿಕ ಪೀಠದ ಎದುರು ಭೋಪಾಲ್ ಅನಿಲ ದುರಂತ ಪ್ರಕರಣ, ಇಡಬ್ಯ್ಲುಎಸ್ ಕೋಟಾದ ಮಾನ್ಯತೆ, ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ವಿಚಾರಣೆ ನಡೆಯುತ್ತಿದೆ.
Advertisement