ಕಾಂಗ್ರೆಸ್ ಅಧ್ಯಕ್ಷ ಗಾದಿಯತ್ತ ಮಲ್ಲಿಕಾರ್ಜುನ ಖರ್ಗೆ: ನಾಮಪತ್ರ ಸಲ್ಲಿಕೆ, ಜಿ-23 ನಾಯಕರು, ಗೆಹ್ಲೋಟ್ ಬೆಂಬಲ

ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷಗಾದಿಯತ್ತ ದಾಪುಗಾಲಿರಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಖರ್ಗೆ ಮತ್ತು ತರೂರ್
ನಾಮಪತ್ರ ಸಲ್ಲಿಸಿದ ಖರ್ಗೆ ಮತ್ತು ತರೂರ್

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಗಾದಿಯತ್ತ ದಾಪುಗಾಲಿರಿಸಿದ್ದಾರೆ.

ರಾಜಸ್ಥಾನ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಹುದ್ದೆ ಚುನಾವಣಾ ರೇಸ್ ನಿಂದ ಹಿಂದೆ ಸರಿದಿರುವುದು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಗಾದಿ ಹಾದಿ ಸುಗಮವಾದಂತಾಗಿದೆ. ಇಂದು ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೆಂಬಲಿತ ನಾಯಕರೊಂದಿಗೆ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. 

ಈ ವೇಳೆ ಮಾತನಾಡಿದ ಖರ್ಗೆ, ಇಂದು ನನ್ನ ಬೆಂಬಲಕ್ಕೆ ಬಂದ ಎಲ್ಲಾ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರಿಗೆ ನನ್ನ ವಂದನೆಗಳು. ಎಲ್ಲ ನಾಯಕರೂ ನನ್ನನ್ನು ಪ್ರೋತ್ಸಾಹಿಸಿದರು, ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17 ರಂದು ಫಲಿತಾಂಶಗಳು ಏನೆಂದು ನಾವು ಎದುರು ನೋಡುತ್ತೇವೆ. ನಾನು ಗೆಲ್ಲುವ ಭರವಸೆ ಇದೆ. ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು 8, 9 ನೇ ತರಗತಿಯಲ್ಲಿದ್ದಾಗ ಅದೇ ಗಾಂಧಿ, ನೆಹರು ಸಿದ್ಧಾಂತದ ಪ್ರಚಾರ ಮಾಡುತ್ತಿದ್ದೆ ಎಂದು ಹೇಳಿದರು.

ಇದಕ್ಕೆ ಇಂಬು ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಪಕ್ಷದ 10 ಮುಖಂಡರು ಬೆಂಬಲ ನೀಡಿದ್ದು ಮಾತ್ರವಲ್ಲದೇ, 30 ನಾಯಕರು ಅಧ್ಯಕ್ಷ ಹುದ್ದೆಗೆ ಖರ್ಗೆ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾದ ಎಕೆ ಆ್ಯಂಟನಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್, ಮಾಜಿ ಕೇಂದ್ರ ಸಚಿವೆ ಅಂಬಿಕಾ ಸೋನಿ, ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ನಾಯಕ ಮುಕುಲ್ ವಸ್ನಿಕ್, ಹಿಮಾಚಲ ಪ್ರದೇಶದ ಅಂಕೀದ್ ಶರ್ಮಾ, ರಾಜಸ್ಥಾನದ ಅಭಿಶೇಕ್ ಸಿಂಘ್ವಿ, ದೆಹಲಿ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಕೇನ್, ಹರ್ಯಾಣದ ಭೂಪಿಂದರ್ ಸಿಂಗ್ ಹೂಡಾ, ಮಧ್ಯ ಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಹಾಗೂ ಬಿಹಾರದ ತಾರಿಕ್ ಅನ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಅಂತೆಯೇ ಉತ್ತರ ಪ್ರದೇಶದ ಸಲ್ಮಾನ್ ಖುರ್ಷೀದ್, ಪುದುಚೇರಿಯ ಮಾಜಿ ಸಿಎಂ ನಾರಾಯಣ ಸ್ವಾಮಿ, ಕರ್ನಾಟಕದ ಸೈಯದ್ ನಾಸೀರ್ ಹುಸೇನ್ ಸೇರಿದಂತೆ 30ಕ್ಕೂ ಹೆಚ್ಚು ನಾಯಕರು ಅಧ್ಯಕ್ಷ ಹುದ್ದೆಗೆ ಖರ್ಗೆ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.

ಗಾಂಧಿ ಕುಟುಂಬ ಸೇರಿ, ಜಿ23 ನಾಯಕರಿಂದಲೂ ಬೆಂಬಲ
ಅಲ್ಲದೆ ಸ್ವತಃ ಗಾಂಧಿ ಕುಟುಂಬ ಖರ್ಗೆ ಬೆನ್ನಿಗೆ ನಿಂತಿದೆ ಎಂದು ಹೇಳಲಾಗಿದ್ದು, ಇದಲ್ಲದೆ ಈ ಹಿಂದೆ ಕಾಂಗ್ರೆಸ್ ಕುಟುಂಬ ನಾಯಕತ್ವ ಪ್ರಶ್ನಿಸಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಜಿ23 ನಾಯಕರೂ ಕೂಡ ಖರ್ಗೆ ಅವರಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವತ್ತ ದಾಪುಗಾಲಿರಿಸಿದ್ದಾರೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಕೇರಳದ ತಿರುವನಂತಪುರ ಸಂಸದ ಶಶಿತರೂರ್ ಹಾಗೂ ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಪಕ್ಷದ ಮುಖಂಡರು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದು. ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com