ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಗಾಂಧಿ ಕುಟುಂಬದ 'ಹಾರ್ಟ್ ಫೇವರೆಟ್' ಮಲ್ಲಿಕಾರ್ಜುನ ಖರ್ಗೆ; ಇಂದು ನಾಮಪತ್ರ ಸಲ್ಲಿಕೆ ಸಾಧ್ಯತೆ!

ಗಾಂಧಿ ಕುಟುಂಬದ ಪರಮಾಪ್ತ ಹಿರಿಯ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜನ ಖರ್ಗೆ
ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ದಿನದಿನಕ್ಕೂ ರಂಗೇರುತ್ತಿದೆ. ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಚುನಾವಣಾ ಕಣದಿಂದ ಹಿಂದೆ ಸರಿದ ಮೇಲೆ ಇಡೀ ದೇಶದ ಗಮನ ಎಐಸಿಸಿ ಅಧ್ಯಕ್ಷ ಚುನಾವಣೆ ಮೇಲೆ ಕೇಂದ್ರೀಕರಿಸಿದೆ.

ಗಾಂಧಿ ಕುಟುಂಬದ ಪರಮಾಪ್ತ ಹಿರಿಯ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್ ಮತ್ತು ಶಶಿ ತರೂರ್ ನಡುವೆ ಈ ಹುದ್ದೆಗೆ ಪೈಪೋಟಿ ಏರ್ಪಡಲಿದೆ ಎಂದು ಹೇಳಲಾಗಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಲಿದ್ದು, ನಾಮಪತ್ರ ಹಿಂಪಡೆಯಲು ಅ.8 ಕೊನೆಯ ದಿನವಾಗಿದೆ. ಅ.17 ರಂದು ಎಲ್ಲ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯಕಚೇರಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅ.19ರಂದು ಫಲಿತಾಂಶ ಪ್ರಕಟವಾಗಲಿದೆ.

ಕೊನೆಯವರೆಗೆ ಕಾದು ನೋಡುವ ತಂತ್ರ ಅನುಸರಿಸಿದ ಕಾಂಗ್ರೆಸ್ ಹೈಕಮಾಂಡ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಪ್ತರೇ ಇಲ್ಲದಾಗಿದೆ. ಹೀಗಾಗಿ ಕಳೆದ ರಾತ್ರಿ ಮಹತ್ವದ ಸಭೆ ನಡೆಸಿದ ಕಾಂಗ್ರೆಸ್ ಹೈಕಮಾಂಡ್, ಆಪ್ತ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸೂಚಿಸಿದ್ದಾರೆ. ಗಾಂಧಿ ಕುಟುಂಬದ ಮಾತಿನಂತೆ ಖರ್ಗೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಗಾಂಧಿ ಕುಟುಂಬಸ್ಥರು ಈ ಬಾರಿ ಉನ್ನತ ಹುದ್ದೆಗೆ ಸ್ಪರ್ಧಿಸದ ಕಾರಣ, ಗ್ರ್ಯಾಂಡ್ ಓಲ್ಡ್ ಪಾರ್ಟಿ 25 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರನ್ನು ಪಡೆಯಲು ಸಿದ್ಧವಾಗಿದೆ.

ತಮ್ಮ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಘೋಷಿಸಿದ್ದು, ಸಿಎಂ ಆಗಿ ಉಳಿಯುವ ಕುರಿತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸೋನಿಯಾ ಗಾಂಧಿ ಅವರನ್ನು ದೆಹಲಿಯ 10 ಜನಪಥ್ ನಿವಾಸದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಸ್ಥಾನದಲ್ಲಿನ ಬಿಕ್ಕಟ್ಟು ಬಗೆಹರಿಸಲು ಬಂದಿದ್ದ ಕೇಂದ್ರದ ವೀಕ್ಷಕರನ್ನು ಧಿಕ್ಕರಿಸಿ, ಪಕ್ಷದ ಶಾಸಕರ ಸಭೆ ನಡೆಸುವ ಅವರ ಯೋಜನೆಯನ್ನು ವಿಫಲಗೊಳಿಸಲಾಯಿತು. ಭಾನುವಾರ ನಡೆದ ಈ ಬೆಳವಣಿಗೆಗಳಿಗೆ ಕ್ಷಮೆಯಾಚಿಸಿದ್ದೇನೆ ಎಂದರು.

ಜಿ23 ನಾಯಕರ ಗುಂಪಿನ ಮತ್ತೊಬ್ಬ ನಾಯಕ ಮನೀಶ್ ತಿವಾರಿ ಕೂಡ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.  ಇನ್ನೊಂದೆಡೆ ದಿಗ್ವಿಜಯ ಸಿಂಗ್‌ ಕಣಕ್ಕಿಳಿಯುವುದಾಗಿ ಗುರುವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ಜಾರ್ಖಂಡ್‌ ಮಾಜಿ ಶಾಸಕ ಕೆ.ಎನ್‌. ತ್ರಿಪಾಠಿ ಕೂಡಾ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದ್ದು, ನಾಮಪತ್ರ ತೆಗೆದುಕೊಂಡು ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com