ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ: ಸುಪ್ರೀಂ ಕೋರ್ಟ್ ನಲ್ಲಿ ವಿಪಕ್ಷಗಳಿಗೆ ಹಿನ್ನಡೆ

ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು, ಬೆದರಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ 14 ವಿಪಕ್ಷಗಳ ಅರ್ಜಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯುಂಟಾಗಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು, ಬೆದರಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ 14 ವಿಪಕ್ಷಗಳ ಅರ್ಜಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯುಂಟಾಗಿದೆ.

ವಿಪಕ್ಷಗಳ ಪರವಾಗಿ ಅಭಿಶೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ 2014 ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿಪಕ್ಷಗಳ ನಾಯಕರ ವಿರುದ್ಧ ದಾಖಲಾಗುವ ಜಾರಿ ನಿರ್ದೇಶನಾಲಯದ ಪ್ರಕರಣಗಳು ಹಾಗೂ ಸಿಬಿಐ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಳ ಕಂಡಿದೆ ಎಂದು ಅರ್ಜಿಯಲ್ಲಿ ಕೇಂದ್ರದ ವಿರುದ್ಧ ಆರೋಪಿಸಿದ್ದರು.

ಕಳೆದ 10 ವರ್ಷಗಳಿಗೆ ಹೋಲಿಕೆ ಮಾಡಿದರೆ ಜಾರಿ ನಿರ್ದೇಶನಾಲಯ 7 ವರ್ಷಗಳಲ್ಲಿ 6 ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಆದರೆ ಈ ಪ್ರಕರಣಗಳ ಪೈಕಿ ಶೇ.23 ರಷ್ಟು ಮಾತ್ರ ಅಪರಾಧಕ್ಕೆ ಶಿಕ್ಷೆ ಕೊಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಎದುರು ಅಂಕಿ-ಅಂಶಗಳನ್ನು ಬಿಚ್ಚಿಟ್ಟಿದ್ದರು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳಲ್ಲಿ ದಾಖಲಾಗಿರುವ ಶೇ.95 ರಷ್ಟು ಪ್ರಕರಣಗಳು ದೇಶಾದ್ಯಂತ ಇರುವ ವಿಪಕ್ಷಗಳ ರಾಜಕಾರಣಿಗಳ ವಿರುದ್ಧವೇ ಆಗಿದೆ. ಇದು ರಾಜಕಾರಣಿಗಳ ವಿರುದ್ಧದ ದ್ವೇಷದ ರಾಜಕಾರಣವಾಗಿದೆ ಎಂದು ಆರೋಪಿಸಿದರು.

ಆದಾಗ್ಯೂ, ಸಿಜೆಐ ಡಿವೈ ಚಂದ್ರಚೂಡ್ ಅರ್ಜಿಯ ಸಿಂಧುತ್ವ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ತನಿಖೆ ಮತ್ತು ಕಾನೂನು ಕ್ರಮದಿಂದ ವಿರೋಧ ಪಕ್ಷಗಳಿಗೆ ವಿನಾಯಿತಿಯನ್ನು ಬಯಸುತ್ತೀರಾ ಮತ್ತು ನಾಗರಿಕರಾಗಿ ಅವರಿಗೆ ಯಾವುದೇ ವಿಶೇಷ ಹಕ್ಕುಗಳಿವೆಯೇ ಎಂದು ಸಿಂಘ್ವಿ ಅವರನ್ನು ಕೇಳಿದರು. 

ರಾಜಕಾರಣಿಗಳಿಗೆ ವಿಶೇಷವಾದ ಮಾರ್ಗಸೂಚಿಗಳನ್ನು ರಚಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಂಸತ್ ನಲ್ಲಿಯೇ ಕಳವಳ ವ್ಯಕ್ತಪಡಿಸಬಹುದು ಎಂದು ಸಿಂಘ್ವಿಗೆ ಸಿಜೆಐ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com