

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಮಾಧ್ಯಮ ಸಂಸ್ಥೆಗೆ ಇಮೇಲ್ ಕಳುಹಿಸಿದ ಆರೋಪದ ಮೇಲೆ ಲಖನೌದ ಶಾಲಾ ಬಾಲಕನನ್ನು ನೋಯ್ಡಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ 16 ವರ್ಷದ ಬಾಲಕನನ್ನು ಇಂದು ಬೆಳಗ್ಗೆ ಲಖನೌದ ಚಿನ್ಹಾಟ್ ಪ್ರದೇಶದಲ್ಲಿ ವಶಕ್ಕೆ ಪಡೆದು, ನೋಯ್ಡಾಗೆ ಕರೆತರಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ(ನೋಯ್ಡಾ) ರಜನೀಶ್ ವರ್ಮಾ ಹೇಳಿದ್ದಾರೆ.
"ಎಪ್ರಿಲ್ 5 ರಂದು ಇಲ್ಲಿನ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ನಂತರ ಈ ಕುರಿತು ತನಿಖೆ ಮಾಡಲಾಯಿತು ಮತ್ತು ಬೆದರಿಕೆ ಸಂದೇಶವನ್ನು ಒಳಗೊಂಡಿರುವ ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚಲು ತಾಂತ್ರಿಕ ತಂಡಗಳನ್ನು ರಚಿಸಲಾಯಿತು" ಎಂದು ವರ್ಮಾ ತಿಳಿಸಿದ್ದಾರೆ.
"ತನಿಖೆಯ ಆಧಾರದ ಮೇಲೆ, ಇಮೇಲ್ ಕಳುಹಿಸಿದವರನ್ನು ಲಖನೌನ ಚಿನ್ಹಾಟ್ ಪ್ರದೇಶದಲ್ಲಿ ಪತ್ತೆಹಚ್ಚಲಾಗಿದೆ ಮತ್ತು ವಶಕ್ಕೆ ಪಡೆಯಲಾಗಿದೆ. ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದು ಶಾಲಾ ಬಾಲಕ ಎಂದು ತಿಳಿದುಬಂದಿದೆ. ಈ ಬಾಲಕ 11ನೇ ತರಗತಿ ಪೂರ್ಣಗೊಳಿಸಿದ್ದು, 12ನೇ ತರಗತಿಗೆ ಪ್ರವೇಶ ಪಡೆದಿದ್ದಾನೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.