ಸಂಬಲ್ಪುರ: ಹನುಮ ಜಯಂತಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಳ್ಳು ವದಂತಿಗಳ ಹರಡುವಿಕೆ ತಡೆಯಲು ಒಡಿಶಾ ಸರ್ಕಾರ ಗುರುವಾರ ಬೆಳಗ್ಗೆ 10 ರಿಂದ 48 ಗಂಟೆಗಳ ಕಾಲ ಸಂಬಲ್ಪುರ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಸಿದೆ.
ಬುಧವಾರ ಸಂಜೆ ಹನುಮ ಜಯಂತಿ ಆಚರಿಸುತ್ತಿದ್ದ ಬೈಕ್ ರ್‍ಯಾಲಿಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪೊಲೀಸ್ ಮಹಿಳೆ ಸೇರಿದಂತೆ ಕನಿಷ್ಠ 10 ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಇದುವರೆಗೆ ಸುಮಾರು 43 ಜನರನ್ನು ಬಂಧಿಸಲಾಗಿದೆ.
ಆದಾಗ್ಯೂ, ಘಟನೆಯಲ್ಲಿ ಗಾಯಗೊಂಡ ನಾಗರಿಕರ ಸಂಖ್ಯೆಯನ್ನೂ ಇನ್ನೂ ಬಹಿರಂಗಗೊಳಿಸಿಲ್ಲ. ನಗರದಲ್ಲಿ ಸಂಭವನೀಯ ಹಿಂಸಾಚಾರವನ್ನು ತಡೆಗಟ್ಟಲು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಶೀಘ್ರದಲ್ಲೇ ಪಥ ಸಂಚಲನ ನಡೆಸಲು ನಿರೀಕ್ಷೆಯಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಬಲ್ಫುರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ದುಷ್ಕರ್ಮಿಗಳು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರಲು ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ವದಂತಿಗಳನ್ನು ಹರಡುತ್ತಿದ್ದು, ಇಂಟರ್ನೆಟ್ ಬಳಕೆ ನಿಷೇಧಿಸಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿಕೆ ಸಿಂಗ್ ಅಧಿಸೂಚನೆ ಹೊರಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಆರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಹೊರಡಿಸಲಾಗಿದೆ. ವಾಟ್ಸಾಪ್, ಟ್ವಿಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ 43 ಜನರನ್ನು ಬಂಝಿಸಲಾಗಿದೆ. 26 ಜನರ ವಿರುದ್ಧ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಿಸ್ಥಿತಿ ಸದ ಹತೋಟಿಗೆ ಬಂದಿದೆ ಎಂದು ಎಸ್ ಪಿ ಗಂಗಾಧರ್ ತಿಳಿಸಿದ್ದಾರೆ.
Advertisement