ಐಶ್ವರ್ಯಾ ರೈ ಮಗಳ ಕುರಿತಾದ ಸುಳ್ಳು ಸುದ್ದಿ ಪ್ರಕಟಣೆಗೆ ಹೈಕೋರ್ಟ್ ನಿರ್ಬಂಧ; ವಿಡಿಯೋಗಳನ್ನು ತೆಗೆದುಹಾಕಲು ಗೂಗಲ್‌ಗೆ ನಿರ್ದೇಶನ

ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಕುರಿತು ತಪ್ಪು ಮಾಹಿತಿಗಳನ್ನು ಪ್ರಕಟಿಸದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧಿಸಿದೆ. ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು 'ಅಸ್ವಸ್ಥ ವಿಕೃತತೆಯನ್ನು' ತೋರಿಸುತ್ತದೆ ಎಂದೂ ಅದು ಹೇಳಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಆರೋಗ್ಯದ ಕುರಿತು ತಪ್ಪು ಮಾಹಿತಿಗಳನ್ನು ಪ್ರಕಟಿಸದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧಿಸಿದೆ. ಮಗುವಿನ ಬಗ್ಗೆ ತಪ್ಪು ಮಾಹಿತಿ ಹರಡುವುದು 'ಅಸ್ವಸ್ಥ ವಿಕೃತತೆಯನ್ನು' ತೋರಿಸುತ್ತದೆ ಎಂದೂ ಅದು ಹೇಳಿದೆ.

ಅಪ್ರಾಪ್ತ ಮಗು ಮತ್ತು ಆಕೆಯ ತಂದೆ ಹೂಡಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ, ಆರಾಧ್ಯ ಬಚ್ಚನ್ ಅವರು 'ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ' ಮತ್ತು ಇತರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವ ಕೆಲವು ವಿಡಿಯೋಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುವಂತೆ ಗೂಗಲ್‌ಗೆ ಸೂಚಿಸಿದೆ.

ನ್ಯಾಯಮೂರ್ತಿ ಸಿ. ಹರಿಶಂಕರ್ ಅವರು, ಪ್ರತಿಯೊಂದು ಮಗುವೂ ಮನ್ನಣೆ ಮತ್ತು ಗೌರವ ಪಡೆಯುವುದಕ್ಕೆ ಅರ್ಹವಾಗಿರುತ್ತದೆ. ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯ ಪ್ರಸಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ, ಪ್ರಶ್ನಾರ್ಹ ವಿಡಿಯೋ ಅಪ್‌ಲೋಡ್ ಮಾಡಿದವರ ವಿವರಗಳ ಬಗ್ಗೆ ದೂರುದಾರರಿಗೆ ತಿಳಿಸಲು ಗೂಗಲ್‌ಗೆ ಹೇಳಿದೆ ಮತ್ತು ಇದೇ ರೀತಿಯ ವಿಡಿಯೋಗಳ ಬಗ್ಗೆ ಗೂಗಲ್‌ನ ಗಮನಕ್ಕೆ ತಂದಾಗಲೆಲ್ಲಾ ಅವುಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.

'1 ರಿಂದ 9 ರವರೆಗಿನ ಪ್ರತಿವಾದಿಗಳು (ಯೂಟ್ಯೂಬ್ ಚಾನೆಲ್‌ಗಳು) ದೂರುದಾರರ ಆರೋಗ್ಯ ಅಥವಾ ದೈಹಿಕ ಸ್ಥಿತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸುವುದು, ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ' ಎಂದು ನ್ಯಾಯಾಲಯ ಆದೇಶಿಸಿದೆ.

ದೂರುದಾರರ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಪ್ರತಿವಾದಿ ಸಂಖ್ಯೆ 10 (ಗೂಗಲ್) ತಕ್ಷಣವೇ ಎಲ್ಲಾ ವಿಡಿಯೋಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುತ್ತದೆ ಮತ್ತು ನಿಷ್ಕ್ರಿಯಗೊಳಿಸುತ್ತದೆ ಎಂದು ಅದು ಹೇಳಿದೆ.

ಮಗುವಿನ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವುದು 'ಅಸ್ವಸ್ಥ ವಿಕೃತತೆ' ಮತ್ತು 'ಮಗುವಿನ ಹಿತಾಸಕ್ತಿಗಳಲ್ಲಿ ಸಂಪೂರ್ಣ ನಿರಾಸಕ್ತಿ'ಯನ್ನು ತೋರಿಸುತ್ತದೆ ಎಂದೂ ನ್ಯಾಯಾಲಯ ಟೀಕಿಸಿದೆ.

ಪ್ರಶ್ನಾರ್ಹವಾದ ನಿರ್ದಿಷ್ಟ ವಿಷಯಕ್ಕೆ ಪ್ರವೇಶವನ್ನು ನಿರ್ಬಂಧಿಸಲು ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿದೆ ಮತ್ತು ಹೆಚ್ಚುವರಿಯಾಗಿ, ಮಧ್ಯವರ್ತಿಗಳಿಗೆ ಸರ್ಕಾರವು ನಿಗದಿಪಡಿಸಿದ ಕಾನೂನು ಚೌಕಟ್ಟನ್ನು ಅನುಸರಿಸಲು ಗೂಗಲ್ ಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com