
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ 25 ರಂದು ಕೇರಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ದೇಶದ ಮೊದಲ ವಾಟರ್ ಮೆಟ್ರೋವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವಾಟರ್ ಮೆಟ್ರೋ ಒಂದು ವಿಶಿಷ್ಟವಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತಹ ಅನುಭವ ಮತ್ತು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಕೊಚ್ಚಿಯಂತಹ ನಗರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.
ಕೊಚ್ಚಿ ನಗರದೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ದೋಣಿಗಳ ಮೂಲಕ ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳನ್ನು ಇದು ಸಂಪರ್ಕಿಸಲಿದೆ. ಬಂದರು ನಗರದಲ್ಲಿ ರೂ. 1,136.83 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಚ್ಚಿ ವಾಟರ್ ಮೆಟ್ರೋವನ್ನು ನಿರ್ಮಿಸಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಕೊಚ್ಚಿ ವಾಟರ್ ಮೆಟ್ರೋ ಯೋಜನೆಯನ್ನು ರಾಜ್ಯದ ಕನಸಿನ ಯೋಜನೆ ಎಂದು ಬಣ್ಣಿಸಿದ್ದಾರೆ. ದಕ್ಷಿಣ ರಾಜ್ಯದ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ರೋಚಕ ಸಮಯಗಳು ಮುಂದಿವೆ ಎಂದು ಅವರು ಹೇಳಿದ್ದಾರೆ.
ಇದು ಕೊಚ್ಚಿ ಮತ್ತು ಸುತ್ತಮುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುವ ಕೇರಳದ ಕನಸಿನ ಯೋಜನೆಯಾಗಿದೆ. ಇದಕ್ಕೆ 78 ಎಲೆಕ್ಟ್ರಿಕ್ ಬೋಟ್‌ಗಳು ಮತ್ತು 38 ಟರ್ಮಿನಲ್‌ಗಳೊಂದಿಗೆ 1,136.83 ಕೋಟಿ ವೆಚ್ಚವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದಾರೆ.
ಯೋಜನೆಯ ಮೊದಲ ಹಂತವಾಗಿ, ಹೈಕೋರ್ಟ್-ವೈಪಿನ್ ನಿಲ್ದಾಣದಿಂದ ವೈಟ್ಟಿಲ-ಕಾಕ್ಕನಾಡ್ ನಿಲ್ದಾಣದವರೆಗೂ ಶೀಘ್ರದಲ್ಲೇ ಸೇವೆ ಪ್ರಾರಂಭವಾಗಲಿದೆ. ಕೊಚ್ಚಿ ಮೆಟ್ರೋ ಮತ್ತು ವಾಟರ್ ಮೆಟ್ರೋ ಎರಡರಲ್ಲೂ "ಕೊಚ್ಚಿ 1" ಕಾರ್ಡ್ ಬಳಸಿ ಪ್ರಯಾಣಿಕರು ಪ್ರಯಾಣಿಸಬಹುದು. ಡಿಜಿಟಲ್ ಟಿಕೆಟ್ ಸಹ ಬುಕ್ ಮಾಡಬಹುದು.
2023 ರ ಏಪ್ರಿಲ್ 24 ಮತ್ತು 25 ರಂದು ಮಧ್ಯಪ್ರದೇಶ, ಕೇರಳ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಏಪ್ರಿಲ್ 25 ರಂದು ಅವರು ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ನ್ನು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.
ಈ ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು 11 ಜಿಲ್ಲೆಗಳನ್ನು ಒಳಗೊಂಡಿದೆ. ಕೊಚ್ಚಿ ವಾಟರ್ ಮೆಟ್ರೋದ ಹೊರತಾಗಿ, ದಿಂಡಿಗಲ್-ಪಳನಿ-ಪಾಲಕ್ಕಾಡ್ ವಿಭಾಗದ ರೈಲು ವಿದ್ಯುದ್ದೀಕರಣವನ್ನು ಸಹ ಪ್ರಧಾನಿಯವರು ಲೋಕಾರ್ಪಣೆಗೊಳಿಸಲಿದ್ದಾರೆ.
Advertisement