ನವದೆಹಲಿ: ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಕನ್ನಡಲ್ಲೇ ಟ್ವೀಟ್ ಮಾಡಿರುವ ಅವರು ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ಕವಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಜನ್ಮದಿನದಂದು ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಚಿಂತನೆಗಳು ಮತ್ತು ಆದರ್ಶಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ ನೀಡುತ್ತವೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಮತ್ತು ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಶಿವಕುಮಾರ್ ಉದಾಸಿ ಅವರ ಟ್ವೀಟನ್ನು ರೀಟ್ವೀಟ್ ಮಾಡಿರುವ ಪ್ರಧಾನಿ, ಜಗದ್ಗುರು ಬಸವೇಶ್ವರರು ತೋರಿದ ಮಾರ್ಗದಲ್ಲಿ ನಾವು ಸದಾ ಸಾಗುತ್ತೇವೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವು ಅವಕಾಶಗಳು ಸಿಕ್ಕಿರುವುದು ನನಗೆ ಗೌರವ ತಂದಿದೆ ಎಂದಿದ್ದಾರೆ.
ಲಿಂಗ ಮತ್ತು ಜಾತಿ ತಾರತಮ್ಯದ ವಿರುದ್ಧ ನಿಂತ ಬಸವೇಶ್ವರರು ಲಿಂಗಾಯತ ಧರ್ಮದ ಉದಯಕ್ಕೆ ಪ್ರೇರಕ ಶಕ್ತಿ ಎಂದು ನಂಬಲಾಗಿದೆ.
12ನೇ ಶತಮಾನದ ಪೂಜ್ಯ ಕನ್ನಡಿಗನ ಜನ್ಮದಿನವು ಕರ್ನಾಟಕ ವಿಧಾನಸಭಾ ಚುನಾವಣೆಯ ತೀವ್ರ ಪ್ರಚಾರದ ನಡುವೆ ಬಂದಿದ್ದು, ಲಿಂಗಾಯತರು ಅತಿ ದೊಡ್ಡ ಸಮುದಾಯವಾಗಿರುವ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ಈ ದಿನವನ್ನು ಆಚರಿಸಲು ಹೊರಟಿವೆ.
Advertisement