ಮಣಿಪುರ ವಿಚಾರವಾಗಿ ಉಭಯ ಸದನದಲ್ಲಿ ಗದ್ದಲ: ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ, ಲೋಕಸಭೆ ಮುಂದೂಡಿಕೆ

ಪಟ್ಟಿ ಮಾಡಿದ ವಿಚಾರಗಳನ್ನು ಬದಿಗಿಟ್ಟು ಮಣಿಪುರ ವಿಚಾರವಾಗಿ ಚರ್ಚೆಗೆ ಆದ್ಯತೆ ನೀಡುವಂತೆ ವಿರೋಧ ಪಕ್ಷಗಳು ಮಾಡಿದ ಮನವಿಯನ್ನು ಸಭಾಪತಿ ಒಪ್ಪದ ಕಾರಣ ವಿರೋಧ ಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಿಂದ ಹೊರನಡೆದರು. ಮತ್ತೊಂದೆಡೆ, ಲೋಕಸಭೆಯನ್ನೂ ಮಧ್ಯಾಹ್ನ 2 ಗಂಟೆಗೆ ಮುಂಡೂದಲಾಯಿತು.
ರಾಜ್ಯಸಭೆ ಸಭಾಪತಿ ಜಗದೀಪ್ ಧಂಖರ್
ರಾಜ್ಯಸಭೆ ಸಭಾಪತಿ ಜಗದೀಪ್ ಧಂಖರ್

ನವದೆಹಲಿ: ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲ ಮುಂದುವರಿದಿದ್ದು, ವಿಸ್ತೃತ ಚರ್ಚೆ ಮತ್ತು ಸದನದಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿವೆ. ಈ ಗದ್ದಲದಲ್ಲಿ ಸುಗಮ ಕಲಾಪ ಮರೀಚಿಕೆಯಾಗಿದೆ.

ಪಟ್ಟಿ ಮಾಡಿದ ವಿಚಾರಗಳನ್ನು ಬದಿಗಿಟ್ಟು ಮಣಿಪುರ ವಿಚಾರವಾಗಿ ಚರ್ಚೆಗೆ ಆದ್ಯತೆ ನೀಡುವಂತೆ ವಿರೋಧ ಪಕ್ಷಗಳು ಮಾಡಿದ ಮನವಿಯನ್ನು ಸಭಾಪತಿ ಒಪ್ಪದ ಕಾರಣ ವಿರೋಧ ಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಿಂದ ಹೊರನಡೆದರು. 

ಪಟ್ಟಿ ಮಾಡಲಾದ ವಿಚಾರಗಳನ್ನು ಮಂಡಿಸಿದ ಕೂಡಲೇ ಸಭಾಪತಿ ಜಗದೀಪ್ ಧಂಖರ್ ಅವರು, ಮಣಿಪುರದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ರಾಜ್ಯಸಭೆಯ ನಿಯಮ 267ರ ಅಡಿಯಲ್ಲಿ 58 ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು.

ಆದರೆ, ನೋಟಿಸ್‌ಗಳನ್ನು ಅಂಗೀಕರಿಸಿಲ್ಲ ಎಂದು ಅವರು ಹೇಳಿದರು. ಇದು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು. ಶೂನ್ಯವೇಳೆಗೆ ಸಭಾಪತಿ ಮುಂದಾದಾಗ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

ಮಣಿಪುರ ಹಿಂಸಾಚಾರ; ಪ್ರತಿಭಟನೆಯ ನಡುವೆಯೇ ಲೋಕಸಭೆ ಮುಂದೂಡಿಕೆ

ಇನ್ನೊಂದೆಡೆ, ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಬುಧವಾರ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 

ಕಲಾಪ ಆರಂಭವಾಗುತ್ತಲೇ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಡ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿದರು. ಸದನದಲ್ಲಿ ಪ್ರಧಾನಿ ಉಪಸ್ಥಿತಿ ಮತ್ತು ಮಣಿಪುರದ ಹಿಂಸಾಚಾರದ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಕೋರಿದರು.

ಸ್ಪೀಕರ್ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ ಕಲಾಪವನ್ನು ನಿರ್ವಹಿಸುತ್ತಿದ್ದ ಮಿಧುನ್ ರೆಡ್ಡಿ ಪ್ರಶ್ನೋತ್ತರ ಕಲಾಪಕ್ಕೆ ಅನುಮತಿ ನೀಡಿದರು. ಆದರೆ, ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ನಡುವೆ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಮಣಿಪುರ ಹಿಂಸಾಚಾರದ ವಿಷಯವಾಗಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಮತ್ತು ಸದನಕ್ಕೆ ಪ್ರಧಾನಿ ನಿರಂತರ ಗೈರುಹಾಜರಿಯಿಂದಾಗಿ ಪ್ರಶ್ನೋತ್ತರ ಅವಧಿಯ ಕಲಾಪವನ್ನು ಮುಂದೂಡಲಾಗುತ್ತಿರುವುದು ಇದು ಸತತ ಮೂರನೇ ದಿನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com