ತಿರುಪತಿ: ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ ವಿಚಾರ ಈಗ ನೆರೆಯ ಆಂಧ್ರಪ್ರದೇಶದ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ಆಕ್ರೋಶಕ್ಕೂ ಕಾರಣವಾಗಿದೆ.
ಕಳೆದ ಎರಡು ದಶಕಗಳಲ್ಲಿ ತಿರುಪತಿ ಲಡ್ಡುಗಳಿಗೆ ಒಂದು ವರ್ಷ ಮಾತ್ರ ನಂದಿನಿ ತುಪ್ಪವನ್ನು ಬಳಸಲಾಗಿದೆ ಎಂದು ತಿರುಮಲ ದೇವಸ್ಥಾನದ(ಟಿಟಿಡಿ) ಅಧಿಕಾರಿಗಳು ಹೇಳಿದ್ದಾರೆ.
ತಿರುಮಲ ದೇವಸ್ಥಾನ ಕಡಿಮೆ ಗುಣಮಟ್ಟದ ತುಪ್ಪ ಖರೀದಿಸುತ್ತಿದೆ ಎಂಬ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಟಿಟಿಡಿ ಕಾರ್ಯಾನಿರ್ವಾಹಕ ಅಧಿಕಾರಿ ಎ ವಿ ಧರ್ಮ ರೆಡ್ಡಿ ಅವರು, "ಕಳೆದ 20 ವರ್ಷಗಳಲ್ಲಿ ಅವರು ಒಂದೇ ಬಾರಿ ತುಪ್ಪ ಸರಬರಾಜು ಮಾಡಿದರು. ಕಳೆದ 19 ವರ್ಷಗಳಿಂದ ನಮ್ಮ ಲಡ್ಡುಗಳು ಕೆಟ್ಟದಾಗಿದ್ದವು ಮತ್ತು ಕೇವಲ ಒಂದು ವರ್ಷ ಮಾತ್ರ ಚೆನ್ನಾಗಿತ್ತು ಎಂದು ನೀವು ಭಾವಿಸುತ್ತೀರಾ, ಅದು ಕೂಡ ಅವರ(ನಂದಿನಿಯ) ಶೇ. 20 ರಷ್ಟು ತುಪ್ಪದೊಂದಿಗೆ?" ಎಂದು ಪ್ರಶ್ನಿಸಿದರು.
"ಕೆಎಂಎಫ್ ಟಿಟಿಡಿಗೆ ಬೇಕಾಗಿದ್ದ ತುಪ್ಪದಲ್ಲಿ ಕೇವಲ ಶೇ. 20 ರಷ್ಟು ಮಾತ್ರ, ಅದು ಒಂದು ವರ್ಷ ಮಾತ್ರ ಪೂರೈಸಿದೆ" ಎಂದು ರೆಡ್ಡಿ ಹೇಳಿದ್ದಾರೆ.
ಇನ್ನು ನಂದಿನಿ ತುಪ್ಪ ಪೂರೈಕೆ ಸಂಬಂಧ ಒಂದೇ ವರ್ಷ ಒಪ್ಪಂದವಾಗಿತ್ತು ಎಂಬ ಟಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಎಂಎಫ್ ಉನ್ನತ ಅಧಿಕಾರಿ, "ನಾವು ಎಷ್ಟು ದಿನಗಳಿಂದ ಟಿಟಿಡಿಗೆ ತುಪ್ಪವನ್ನು ಪೂರೈಸುತ್ತಿದ್ದೇವೆ ಎಂಬುದರ ಕೆಎಂಎಫ್ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
"ನಾವು ಟಿಟಿಡಿಗೆ ಕೊನೆಯದಾಗಿ 345 ಮೆಟ್ರಿಕ್ ಟನ್(ತುಪ್ಪ), ಅಂದರೆ 2021-22ರಲ್ಲಿ ಸರಬರಾಜು ಮಾಡಿದ್ದೇವೆ. ನಾವು ಮತ್ತೊಮ್ಮೆ(ಟಿಟಿಡಿಯೊಂದಿಗೆ) ಸಂಪರ್ಕ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ತುಪ್ಪದ ಗುಣಮಟ್ಟ ತುಂಬಾ ಹೆಚ್ಚಾಗಿದೆ ಎಂದು ನಾವು ಅವರಿಗೆ ಹೇಳುತ್ತೇವೆ. ನಾವು ಅವರಿಗೆ ಉತ್ತಮ ತುಪ್ಪವನ್ನು ನೀಡಲು ಬಯಸುತ್ತೇವೆ. ಆದರೆ ಬೆಲೆಯಲ್ಲಿ ಮಾತ್ರ ರಾಜಿ ಇಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಕೆ.ಜಗದೀಶ್ ಅವರು ಪಿಟಿಐಗೆ ತಿಳಿಸಿದ್ದಾರೆ.
Advertisement