ವಿಎಚ್‌ಪಿ-ಭಜರಂಗ ದಳ ಪ್ರತಿಭಟನಾ ಮೆರವಣಿಗೆಗೆ 'ಸುಪ್ರೀಂ' ಸಮ್ಮತಿ; ಶಾಂತಿ ಕಾಪಾಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸೂಚನೆ

ನುಹ್ ಹಿಂಸಾಚಾರದ ವಿರುದ್ಧ ದೆಹಲಿ-ಎನ್‌ಸಿಆರ್‌ನಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ವಿಎಚ್‌ಪಿ ಮತ್ತು ಬಜರಂಗದಳಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದರೆ, ಈ ವೇಳೆ ಯಾವುದೇ ದ್ವೇಷ ಭಾಷಣ ಅಥವಾ ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ನುಹ್ ಹಿಂಸಾಚಾರದ ವಿರುದ್ಧ ದೆಹಲಿ-ಎನ್‌ಸಿಆರ್‌ನಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ವಿಎಚ್‌ಪಿ ಮತ್ತು ಬಜರಂಗದಳಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದರೆ, ಈ ವೇಳೆ ಯಾವುದೇ ದ್ವೇಷ ಭಾಷಣ ಅಥವಾ ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮಧ್ಯಾಹ್ನ 2 ಗಂಟೆಗೆ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‍‌ವಿ ಭಾಟಿ ಅವರಿದ್ದ ಪೀಠವು, ಪ್ರತಿಭಟನಾ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. 

ಅಗತ್ಯವಿದ್ದರೆ, ಹೆಚ್ಚುವರಿ ಪೊಲೀಸ್ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಆ ವಿಡಿಯೋ ರೆಕಾರ್ಡಿಂಗ್ ಅನ್ನು ಸಂರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯ ಆದೇಶಿಸಿದೆ.

ಹರಿಯಾಣದ ನೂಹ್‌ನಲ್ಲಿ ಸೋಮವಾರ (ಜುಲೈ 31) ವಿಎಚ್‌ಪಿ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳು ಸೇರಿದಂತೆ ಆರು ಮಂದಿ ಸಾವಿಗೀಡಾಗಿದ್ದಾರೆ.

ಈ ಸಂಬಂಧ ಇದುವರೆಗೆ 116 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಯಾವುದೇ ಔಪಚಾರಿಕ ದೂರಿಗೆ ಕಾಯದೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ ತನ್ನ 2022ರ ಅಕ್ಟೋಬರ್ 21ರಂದು ನೀಡಿದ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಅಧಿಕಾರಿಗಳಿಗೆ ನಿರ್ದೇಶಿಸಿದ ನ್ಯಾಯಮೂರ್ತಿ ಖನ್ನಾ, 'ಅಧಿಕಾರಿಗಳು ಈ ಬಗ್ಗೆ ತಿಳಿದಿರಬೇಕು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಏನಾಗುತ್ತಿದೆ ಮತ್ತು ಏನಾಯಿತು ಎಂಬುದು ನಮಗೆ ತಿಳಿದಿಲ್ಲ. ಮೆರವಣಿಗೆ ವೇಳೆ ಯಾವುದೇ ದ್ವೇಷ ಭಾಷಣ ಮತ್ತು ಹಿಂಸಾಚಾರವಾಗದಂತೆ ದಯವಿಟ್ಟು ನೋಡಿಕೊಳ್ಳಿ. ಎಲ್ಲವೂ ರೆಕಾರ್ಡ್ ಆಗುವಂತೆ ನೋಡಿಕೊಳ್ಳಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ. ಅಗತ್ಯವಿರುವ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಿ' ಎಂದು ಸೂಚಿಸಿದ್ದಾರೆ.

ಪರಿಸ್ಥಿತಿ ಅಸ್ಥಿರವಾಗಿದೆ ಎಂದ ಹಿರಿಯ ವಕೀಲ ಸಿಯು ಸಿಂಗ್, 23 ವಿವಿಧ ಸ್ಥಳಗಳಲ್ಲಿ ರ‍್ಯಾಲಿಗಳನ್ನು ನಡೆಸಲಾಗುತ್ತಿದೆ. ಈ ಪೈಕಿ ಕೆಲವು ನಡೆದಿವೆ, ಇನ್ನೂ ಕೆಲವು ಆಗಬೇಕಿದೆ ಎಂದು ಪೀಠದ ಮುಂದೆ ಹೇಳಿದರು.

ನುಹ್ ಮತ್ತು ಗುರುಗ್ರಾಮದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಲೇಖಿಸಿ, ಸಣ್ಣದೊಂದು ಪ್ರಚೋದನೆಯು ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಗಲಭೆಯ ಬಳಿಕ ಕೋಮು ಗಲಭೆಯನ್ನು ಕೆರಳಿಸುವ ಮತ್ತು ಹಿಂಸಾಚಾರಕ್ಕೆ ಪ್ರಚೋದಿಸುವ ರ‍್ಯಾಲಿಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com