ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ವಿವಾದಿತ ನಾಯಕ ಕಪಿಲ್ ಮಿಶ್ರಾ ನೇಮಕ

ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ವಿವಾದಿತ ನಾಯಕ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.
ಕಪಿಲ್ ಮಿಶ್ರಾ
ಕಪಿಲ್ ಮಿಶ್ರಾ

ನವದೆಹಲಿ: ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ವಿವಾದಿತ ನಾಯಕ ಕಪಿಲ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.

ಹೌದು.. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ದೆಹಲಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಕಪಿಲ್ ಮಿಶ್ರಾ ನೇಮಕ ಕುರಿತು ಬಿಜೆಪಿ ಅಧಿಕೃತ ಆದೇಶ ಹೊರಡಿಸಿದೆ. ವೀರೇಂದ್ರ ಸಚ್‌ದೇವ್ ಅವರು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ. “ಬಿಜೆಪಿ ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರ ಆದೇಶದ ಮೇರೆಗೆ, ಕಪಿಲ್ ಮಿಶ್ರಾ ಅವರನ್ನು ದೆಹಲಿ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿ ತಕ್ಷಣವೇ ಜಾರಿಗೆ ಬರಲಿದೆ ಎಂದು ಪಕ್ಷ ಹೇಳಿದೆ.

ವಿವಾದಿತ ನಾಯಕನಿಗೆ ಉನ್ನತ ಹುದ್ದೆ
ದೆಹಲಿಯ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು 2019 ರಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರಾಗಿ ಅನರ್ಹಗೊಂಡ ನಂತರ ಬಿಜೆಪಿ ಸೇರಿದ್ದರು. ಹಿಂದೆ ದೆಹಲಿಯ ಆಪ್‌ ಸರ್ಕಾರದ ಸಚಿವರಾಗಿದ್ದ ಕಪಿಲ್‌ ಮಿಶ್ರಾ ನಂತರ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಆಪ್‌ ತೊರೆದು ಬಿಜೆಪಿ ಸೇರಿದ್ದರು. 2020 ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಮಾಡೆಲ್‌ ಟೌನ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಆಪ್‌ ಅಭ್ಯರ್ಥಿ ಅಖಿಲೇಶ್‌ ಪಟಿ ತ್ರಿಪಾಠಿ ಎದುರು ಸೋತಿದ್ದರು. 

2020ರಲ್ಲಿ ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಡ್ಡಿಯುಂಟಾಗಿದ್ದ ರಸ್ತೆಗಳನ್ನು ತಕ್ಷಣ ತೆರವುಗೊಳಿಸುವಂತೆ ದೆಹಲಿ ಪೊಲೀಸರಿಗೆ ಮಿಶ್ರಾ ಕೊನೆಯ ಎಚ್ಚರಿಕೆ ನೀಡಿದ್ದರು. ಅಲ್ಲದೆ ಅವರ ಪ್ರಚೋದನಕಾರಿ ಟ್ವೀಟ್‌ಗಳನ್ನು ವಿರೋಧಿಸಿ ವಕೀಲರ ಗುಂಪೊಂದು ಅವರ ವಿರುದ್ಧ ಪೊಲೀಸ್‌ ದೂರು ಕೂಡ ದಾಖಲಿಸಿತ್ತು. 2020 ರಲ್ಲಿ ಚುನಾವಣಾ ಆಯೋಗವು ಮಿಶ್ರಾ ಅವರ ಕೋಮು ಪ್ರಚೋದಕ ಟ್ವೀಟ್‌ ತೆಗೆದುಹಾಕುವಂತೆ ಟ್ವಿಟ್ಟರ್‌ಗೆ ಸೂಚಿಸಿತ್ತು. ಸಿಎಎ ವಿರೋಧಿ ಪ್ರತಿಭಟನೆಗಳನ್ನು ಟೀಕಿಸಿ ನಗರದ “ಮಿನಿ-ಪಾಕಿಸ್ತಾನ್‌ಗಳು” ಎಂದು ಪ್ರತಿಭಟನಾ ಸ್ಥಳಗಳನ್ನು ಉಲ್ಲೇಖಿಸಿರುವುದು ಆಕ್ಷೇಪಾರ್ಹ ಎಂದು ಆಯೋಗ ಹೇಳಿತ್ತು.

ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ
ಈ ತಿಂಗಳ ಆರಂಭದಲ್ಲಿ, ಬಿಜೆಪಿ ನಾಲ್ಕು ಚುನಾವಣೆಗೆ ಒಳಪಟ್ಟ ರಾಜ್ಯಗಳಿಗೆ ಅಂದರೆ ರಾಜಸ್ಥಾನ, ಛತ್ತೀಸ್‌ಗಢ. ತೆಲಂಗಾಣ ಮತ್ತು ಮಧ್ಯಪ್ರದೇಶ ಚುನಾವಣಾ ಉಸ್ತುವಾರಿಗಳನ್ನು ಘೋಷಿಸಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಬಿಜೆಪಿಯ ರಾಜಸ್ಥಾನ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದರೆ, ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ಅವರನ್ನು ಸಹ-ಪ್ರಭಾರಿಗಳಾಗಿ ನೇಮಿಸಲಾಗಿದೆ.

ಇದಲ್ಲದೆ, ಓಂ ಪ್ರಕಾಶ್ ಮಾಥುರ್ ಅವರನ್ನು ಬಿಜೆಪಿಯ ಛತ್ತೀಸ್‌ಗಢ ಚುನಾವಣಾ ಉಸ್ತುವಾರಿಯಾಗಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಸಹ-ಪ್ರಭಾರಿಯಾಗಿ ನೇಮಿಸಿದ್ದಾರೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಧ್ಯಪ್ರದೇಶ ಚುನಾವಣಾ ಉಸ್ತುವಾರಿಯಾಗಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹ-ಪ್ರಭಾರಿಗಳಾಗಿದ್ದಾರೆ. ಅಲ್ಲದೆ, ಬಿಜೆಪಿ ಸಂಸದ ಪ್ರಕಾಶ್ ಜಾವಡೇಕರ್ ಅವರನ್ನು ತೆಲಂಗಾಣ ಚುನಾವಣಾ ಉಸ್ತುವಾರಿಯಾಗಿ ಮತ್ತು ಸುನೀಲ್ ಬನ್ಸಾಲ್ ಅವರನ್ನು ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಜ್ಜಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com