ದೇಶದ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಶಂಕುಸ್ಥಾಪನೆ: ಪ್ರಧಾನಿ ಮೋದಿಯಿಂದ ವರ್ಚುವಲ್ ಮೂಲಕ ಉದ್ಘಾಟನೆ

ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಇಂದು ಭಾನುವಾರ ವರ್ಚ್ ವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 508 ರೈಲು ನಿಲ್ದಾಣಗಳು ಮೇಲ್ದರ್ಜೆಗೇರಲಿವೆ. 
ಪ್ರಧಾನಿ ಮೋದಿಯಿಂದ ಉದ್ಘಾಟನೆ
ಪ್ರಧಾನಿ ಮೋದಿಯಿಂದ ಉದ್ಘಾಟನೆ

ನವದೆಹಲಿ: ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಇಂದು ಭಾನುವಾರ ವರ್ಚ್ ವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 508 ರೈಲು ನಿಲ್ದಾಣಗಳು ಮೇಲ್ದರ್ಜೆಗೇರಲಿವೆ. 

ಇಂದು ರೈಲ್ವೆ ವಲಯಕ್ಕೆ ಒಂದು ಹೆಗ್ಗುರುತು ದಿನ. ಐತಿಹಾಸಿಕ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಭಾರತದಾದ್ಯಂತ 508 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಅಡಿಪಾಯ ಹಾಕಲಾಗುತ್ತದೆ. ಸುಮಾರು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುವ ಯೋಜನೆ ಇದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಅಭಿವೃದ್ಧಿಯ ಗುರಿಯ ಕಡೆಗೆ ಚಲಿಸುತ್ತಿರುವ ಭಾರತ ಈಗ ಸುವರ್ಣ ಯುಗದ ಆರಂಭದಲ್ಲಿದೆ. ಭಾರತೀಯರಲ್ಲಿ ಹೊಸ ಶಕ್ತಿ, ಹೊಸ ಉತ್ಸಾಹ, ಸ್ಫೂರ್ತಿ ಮತ್ತು ಹೊಸ ನಿರ್ಣಯ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ, ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದರು.

ಪ್ರತಿ ಅಮೃತ ನಿಲ್ದಾಣಗಳು ನಗರದ ಆಧುನಿಕ ಸ್ಪೂರ್ತಿ ಮತ್ತು ಪುರಾತನ ಸಂಪ್ರದಾಯಗಳನ್ನು ಬಿಂಬಿಸುತ್ತದೆ. ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸಿ ಪರಿಸರ ಸ್ನೇಹಿಯನ್ನಾಗಿ ಮಾಡುವುದಕ್ಕೆ ನಾವು ಒತ್ತು ನೀಡುತ್ತೇವೆ ಎಂದರು.

ಏನಿದು ಅಮೃತ ಭಾರತ ಸ್ಟೇಷನ್ ಯೋಜನೆ, ತಗಲುವ ವೆಚ್ಚವೆಷ್ಟು?: ಈ ಯೋಜನೆಯಡಿಯಲ್ಲಿ, ದೇಶದಾದ್ಯಂತ ಒಟ್ಟು 1309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತದೆ. ಒಟ್ಟು ವೆಚ್ಚ 24,470 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಕೈಗೊಳ್ಳಲಾಗುತ್ತದೆ. ಈ ನಿಲ್ದಾಣಗಳನ್ನು ನಗರದ ಎರಡೂ ಬದಿಗಳನ್ನು ಸರಿಯಾಗಿ ಸಂಯೋಜಿಸಿ ಸಿಟಿ ಸೆಂಟರ್ ಗಳಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.

ದೇಶಾದ್ಯಂತ ಮೊದಲ ಹಂತದಲ್ಲಿ ಕೈಗೊಳ್ಳಲಾಗುವ 508 ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, 22 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. ಪಂಜಾಬ್‌ನಲ್ಲಿ, ಗುಜರಾತ್ ಮತ್ತು ತೆಲಂಗಾಣದಲ್ಲಿ 21-21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ 18-18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ನಿಲ್ದಾಣಗಳು ಇರಲಿವೆ.

ನವೀಕರಣ ಹೇಗೆ?: ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ರೈಲು ನಿಲ್ದಾಣಗಳನ್ನು ಸಿದ್ಧಪಡಿಸಲಾಗುತ್ತದೆ. ಉತ್ತಮವಾಗಿ ವಿನ್ಯಾಸಗೊಳಿಸಲಾದ ಸಂಚಾರ ಸೌಲಭ್ಯದೊಂದಿಗೆ ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಪ್ರೇರಿತವಾಗಿರುತ್ತದೆ. ಈ ರೈಲು ನಿಲ್ದಾಣವು ಆ ನಗರ ಅಥವಾ ಸ್ಥಳದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.

ಭಾರತದಲ್ಲಿನ ಸುಮಾರು 1,300 ಪ್ರಮುಖ ರೈಲು ನಿಲ್ದಾಣಗಳನ್ನು ಈಗ ಅಮೃತ್ ಭಾರತ್ ರೈಲು ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಅವುಗಳನ್ನು ಆಧುನಿಕ ರೀತಿಯಲ್ಲಿ ಮರು-ಅಭಿವೃದ್ಧಿಪಡಿಸಲಾಗುವುದು. ಇವುಗಳಲ್ಲಿ 508 ಅಮೃತ್ ಭಾರತ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಯ ಕೆಲಸ ಇಂದು ಆರಂಭವಾಗಿದೆ. ಈ 508 ಅಮೃತ್ ಭಾರತ್ ಸ್ಟೇಷನ್‌ಗಳ ಪುನರಾಭಿವೃದ್ಧಿಗೆ ಸುಮಾರು 25,000 ಕೋಟಿ ಖರ್ಚು ಮಾಡಲಾಗುವುದು. ಇದು ಮೂಲಸೌಕರ್ಯ, ರೈಲ್ವೇ ಮತ್ತು ಮುಖ್ಯವಾಗಿ ದೇಶದ ಸಾಮಾನ್ಯ ಜನರಿಗೆ ಬಹಳ ಸಹಾಯವಾಗಲಿದೆ ಎಂದು ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಹೇಳಿದರು.

ಇಂದು ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಭಾರತದ ಬಗೆಗಿನ ವಿಶ್ವ ದೃಷ್ಟಿಕೋನ ಬದಲಾಗಿದೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ -ಸುಮಾರು 30 ವರ್ಷಗಳ ನಂತರ ಭಾರತೀಯರು ಪೂರ್ಣ ಬಹುಮತದ ಸರ್ಕಾರವನ್ನು ತಂದರು ಎರಡನೆಯದಾಗಿ ಪೂರ್ಣ ಬಹುಮತದ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು ಮತ್ತು ಸವಾಲುಗಳಿಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿತು ಎಂದರು.

ಸ್ವದೇಶಿ ಚಳವಳಿ: ನಾಳೆ ಆಗಸ್ಟ್ 7 ರಂದು ದೇಶವು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತದೆ - ಸ್ವದೇಶಿ ಚಳುವಳಿಗೆ ಸಮರ್ಪಿತವಾದ ದಿನ. ಪ್ರತಿಯೊಬ್ಬ ಭಾರತೀಯನಿಗೂ, 7ನೇ ಆಗಸ್ಟ್ 'ಲೋಕಲ್ ಫಾರ್ ವೋಕಲ್' ಎಂಬ ನಿರ್ಣಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ.

ಆಗಸ್ಟ್ 9 ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದ ದಿನ. ಮಹಾತ್ಮಾ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿ ನೀಡಿದರು. ಭಾರತ ಬಿಟ್ಟು ತೊಲಗಿ ಚಳವಳಿಯು ಸ್ವಾತಂತ್ರ್ಯವನ್ನು ಪಡೆಯುವತ್ತ ಭಾರತದ ಮೆಟ್ಟಿಲುಗಳಲ್ಲಿ ಹೊಸ ಶಕ್ತಿಯನ್ನು ತುಂಬಿತು. ಇದರಿಂದ ಪ್ರೇರಿತರಾಗಿ ಇಂದು ಇಡೀ ದೇಶವೇ ಎಲ್ಲ ಅನಿಷ್ಟಗಳಿಗೂ ‘ಕ್ವಿಟ್ ಇಂಡಿಯಾ’ ಎನ್ನುತ್ತಿದೆ. ಎಲ್ಲೆಡೆ ಒಂದೇ ಧ್ವನಿ ಇದೆ - ಭ್ರಷ್ಟಾಚಾರ, ಭಾರತ ಬಿಟ್ಟು ತೊಲಗಿ. ರಾಜವಂಶ, ಭಾರತ ಬಿಟ್ಟು ತೊಲಗಿ. ಸಮಾಧಾನ, ಭಾರತ ಬಿಟ್ಟು ತೊಲಗಿ ಎಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com