ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿದ್ದು, ತೆಹ್ರಿ ಜಿಲ್ಲೆಯಲ್ಲಿ ಶನಿವಾರ ಗೋಡೆ ಕುಸಿದು ಮಲಗಿದ್ದ ಇಬ್ಬರು ಮಕ್ಕಳ ಸಾವನ್ನಪ್ಪಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಅಧಿಕಾರಿಗಳ ಪ್ರಕಾರ, ರಾತ್ರಿ ಸುರಿದ ಭಾರೀ ಮಳೆಯಿಂದ ಗೋಡೆ ಕುಸಿದಿದೆ. ಪೊಲೀಸರು ಮತ್ತು ಜಿಲ್ಲಾಡಳಿತ ತಂಡಗಳು ಸ್ಥಳಕ್ಕೆ ಧಾವಿಸಿ, ಮಕ್ಕಳನ್ನು ಅವಶೇಷಗಳಿಂದ ಹೊರತೆಗೆದು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮೃತರನ್ನು ಪ್ರವೀಣ್ ದಾಸ್ ಅವರ 12 ವರ್ಷದ ಮಗಳು ಕುಮಾರಿ ಸ್ನೇಹಾ ಮತ್ತು 10 ವರ್ಷದ ಮಗ ರಣವೀರ್ ಎಂದು ಗುರುತಿಸಲಾಗಿದೆ. ಅಪಘಡದಲ್ಲಿ ಪ್ರವೀಣ್ ಅವರ ತಂದೆಗೂ ಗಾಯಗಳಾಗಿವೆ.
"ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮರೋಡಾ ಸೇತುವೆ ಕುಸಿದಿದ್ದು, ನೀರಿನಲ್ಲಿ ಕೊಚ್ಚಿಬಂದ ಸೇತುವೆಯ ಅವಶೇಷಗಳಿಂದ ಮನೆಯ ಗೋಡೆ ಕುಸಿದಿದೆ. ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ತೆರಳಿ, ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಹೊರತೆಗೆದಿದ್ದಾರೆ ಎಂದು ತೆಹ್ರಿ ಗರ್ವಾಲ್ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಬ್ರಿಜೇಶ್ ಭಟ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Advertisement