ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದ ಗೌರಿಕುಂಡ್ ಬಳಿ ಭೂಕುಸಿತ ಉಂಟಾಗಿದ್ದು, ಪರಿಣಾಮ ಕನಿಷ್ಟ 10 ರಿಂದ 12 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಧಳಕ್ಕೆ ತಲುಪಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ಮಾತನಾಡಿ, "ಗುರುವಾರ ತಡರಾತ್ರಿ ಗೌರಿಕುಂಡ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಪರಿಣಾಮ ಎರಡು ಅಂಗಡಿಗಳಿಗೆ ಹಾನಿಯಾಗಿದ್ದು, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು ನಾಪತ್ತೆಯಾಗಿದ್ದಾರೆಂದು ಹೇಳಿದ್ದಾರೆ.
ಭೂ ಕುಸಿತ ಪರಿಣಾಮ ಬೆಟ್ಟದಿಂದ ಭಾರೀ ಬಂಡೆಗಳು ಮತ್ತು ಕಲ್ಲುಗಳು ಬೀಳುತ್ತಿದೆ. ಇದರಿಂದಾಗಿ ರಕ್ಷಣಾ ಕಾರ್ಯಾಚಱಣೆಗೆ ಹಿನ್ನೆಡೆಯುಂಟಾಗುತ್ತಿದೆ. ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳದಲ್ಲಿದ್ದು, ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಹೇಳಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಪಕ್ಕದ ಗುಡ್ಡದಿಂದ ನಿರಂತರವಾಗಿ ಕಲ್ಲುಗಳು ಬೀಳುತ್ತಿರುವುದರಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವುದು ಕಷ್ಟಕರವಾಗಿದ್ದು, ಪರಿಹಾರ ಕಾರ್ಯಕ್ಕೂ ಅಡ್ಡಿಯಾಗಿದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಾಪತ್ತೆಯಾದವರನ್ನು ಅಶು (23 ವರ್ಷ), ಪ್ರಿಯಾಂಶು ಚಮೋಲ, ಕಮಲೇಶ ಚಮೋಲ (18 ವರ್ಷ), ರಣಬೀರ್ ಸಿಂಗ್(28), ಅಮರ್ ಬೋಹ್ರಾ, ಅನಿತಾ ಬೋಹ್ರಾ (26 ವರ್ಷ), ರಾಧಿಕಾ ಬೋಹ್ರಾ (14 ವರ್ಷ), ಪಿಂಕಿ ಬೋಹ್ರಾ (8 ವರ್ಷ), ಪೃಥ್ವಿ ಬೋಹ್ರಾ (7 ವರ್ಷ), ಜತಿನ್ (6 ವರ್ಷ), ವಕಿಲ್ (3 ವರ್ಷ), ವಿನೋದ್ (26 ವರ್ಷ), ಮುಲಾಯಂ (25 ವರ್ಷ) ಎಂದು ಗುರ್ತಿಸಲಾಗಿದೆ.
Advertisement