
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದ್ದು, ಸಂಸತ್ತಿಗೆ ಆಗಮಿಸಿದ ಅವರಿಗೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರು ಆತ್ಮೀಯ ಸ್ವಾಗತ ಕೋರಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂಸತ್ ಭವನಕ್ಕೆ ಆಗಮಿಸಿದ ರಾಹುಲ್ ಗಾಂಧಿ, ನೇರವಾಗಿ ಮಹಾತ್ಮ ಗಾಂಧಿ ಪ್ರತಿಮೆ ಬಳಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಸಂಸತ್ತಿನ ಗೇಟ್ ನಂಬರ್ ಒಂದರಲ್ಲಿ ಅವರನ್ನು ಸ್ವಾಗತಿಸಿದ ಕಾಂಗ್ರೆಸ್ ಸಂಸದರು ಮತ್ತು INDIA ಒಕ್ಕೂಟದ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು.
ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎಂದು ಆದೇಶಿಸಿದ್ದ ಗುಜರಾತ್‌ನ ಸೂರತ್ ನ್ಯಾಯಾಲಯ, ಮಾರ್ಚ್ 23 ರಂದು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಮರುದಿನವೇ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಸೂರತ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸೂರತ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿತ್ತು.
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದರು.
ಸುಪ್ರೀಂ ತೀರ್ಪಿನ ನಂತರ ಲೋಕಸಭೆ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ರಾಹುಲ್ ಗಾಂಧಿಯವರ ಸದಸ್ಯತ್ವದ ಅನರ್ಹತೆಯನ್ನು ಹಿಂಪಡೆದಿದ್ದು, ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.
Advertisement