ನಿಶಿಕಾಂತ್ ದುಬೆ ಹೇಳಿಕೆ; ಕಡತಗಳಿಂದ ತೆಗೆಯದ ಬಗ್ಗೆ ಕಾಂಗ್ರೆಸ್ ನಾಯಕರಿಂದ ಸ್ಪೀಕರ್ ಓಂ ಬಿರ್ಲಾ ಭೇಟಿ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆಗಳನ್ನು ಕಡತಗಳಿಂದ ತೆಗೆಯದ ಕುರಿತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆಗಳನ್ನು ಕಡತಗಳಿಂದ ತೆಗೆಯದ ಕುರಿತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಂಗಳವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು.

ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಗೌರವ್ ಗೊಗೊಯ್, ಮಾಣಿಕಂ ಟ್ಯಾಗೋರ್ ಮತ್ತು ಕೆ ಸುರೇಶ್ ಅವರೊಂದಿಗೆ ಚೌಧರಿ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯದ ಕುರಿತು ವಿರೋಧ ಪಕ್ಷಗಳ ಒಕ್ಕೂಟವಾದ INDIA ದ ಸದಸ್ಯರೂ ಚರ್ಚಿಸಿದ್ದಾರೆ ಎನ್ನಲಾಗಿದೆ.

ಕಲಾಪದಲ್ಲಿ ಸೋಮವಾರ ನಡೆದ ಚರ್ಚೆಯ ಕೆಲ ಭಾಗವನ್ನು ಮೊದಲಿಗೆ ಕಡತದಿಂದ ತೆಗೆಯಲಾಗಿತ್ತು. ನಂತರ ಆ ಪೈಕಿ ಕೆಲವನ್ನು ಕಡತಗಳಲ್ಲಿ ಮರು-ದಾಖಲಿಸುವುದರ ವಿರುದ್ಧ ವಿರೋಧ ಪಕ್ಷದ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು. ಈ ಗದ್ದಲದ ನಡುವೆ ಲೋಕಸಭೆಯ ಕಲಾಪವನ್ನು ಬೆಳಿಗ್ಗೆ ಮುಂದೂಡಲಾಯಿತು.

ದುಬೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಕಡತಗಳಿಂದ ತೆಗೆದುಹಾಕಲಾಗಿತ್ತು. ಆದರೆ ಆ ಭಾಗಗಳನ್ನು ಮರು-ದಾಖಲಿಸಿರುವುದರ ವಿರುದ್ಧ ವಿರೋಧ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದು ಪ್ರತಿಭಟನೆಗೆ ಕಾರಣವಾಯಿತು. ಹಿಂದಿನ ಚರ್ಚೆಯ ಭಾಗವನ್ನು ಕಡತದಿಂದ ಶಾಶ್ವತವಾಗಿ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. 

ಕಲಾಪ ಆರಂಭವಾಗುತ್ತಿದ್ದಂತೆ, ಅಧೀರ್ ರಂಜನ್ ಚೌಧರಿ ಅವರು ನಿಶಿಕಾಂತ್ ದುಬೆ ಅವರು ಮಾಡಿದ ಹೇಳಿಕೆಗಳ ಕಡತದಿಂದ ತೆಗೆಯಲಾದ ವಿಚಾರಗಳ ಪೈಕಿ ಕೆಲವನ್ನು ಮರು-ದಾಖಲು ಮಾಡಲಾಗಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿದರು.

ನ್ಯೂಸ್‌ಕ್ಲಿಕ್ ವೆಬ್ ಪೋರ್ಟಲ್ 38 ಕೋಟಿ ರೂಪಾಯಿ ಹಣವನ್ನು ಪಡೆದಿದೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಈ ಹಣವನ್ನು ಬಳಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯನ್ನು ಸೋಮವಾರ ನಿಶಿಕಾಂತ್ ದುಬೆ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದರು.

ನ್ಯೂಸ್‌ಕ್ಲಿಕ್ ಭಾರತ ವಿರೋಧಿ 'ತುಕ್ಡೆ ತುಕ್ಡೆ' ಗ್ಯಾಂಗ್‌ನ ಸದಸ್ಯ ಮತ್ತು ಈ ಹಣದ ಫಲಾನುಭವಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. 2005 ಮತ್ತು 2014ರ ನಡುವೆ, ಚೀನಾ ಸರ್ಕಾರವು ಕಾಂಗ್ರೆಸ್‌ಗೆ ಹಣ ಪಾವತಿಸಿದೆ. ಕಾಂಗ್ರೆಸ್ ಭಾರತವನ್ನು ವಿಭಜಿಸಲು ಬಯಸುತ್ತಿದೆ ಎಂದು ಪ್ರತಿಪಕ್ಷಗಳ ಗದ್ದಲದ ನಡುವೆಯೇ ದುಬೆ ಆರೋಪಿಸಿದ್ದರು.

ನಂತರ, ದುಬೆ ಅವರ ಭಾಷಣದ ಕೆಲವು ಭಾಗಗಳನ್ನು ಕಡತಗಳಿಂದ ತೆಗೆದುಹಾಕಲಾಗಿದೆ ಎಂದು ಲೋಕಸಭೆಯ ಸಚಿವಾಲಯ ನೀಡಿದ ಹೇಳಿಕೆಯಲ್ಲಿ ತಿಳಿಸಿತ್ತು. ಆದಾಗ್ಯೂ, ಸಂಜೆ ತಡವಾಗಿ ಈ ತೆಗೆದುಹಾಕಲಾದ ಭಾಗಗಳ ಪೈಕಿ ಕೆಲವನ್ನು ಲೋಕಸಭೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ವೆಬ್‌ಸೈಟ್‌ನಲ್ಲಿ ಏನನ್ನು ಅಪ್‌ಲೋಡ್ ಮಾಡಲಾಗಿದೆಯೋ ಅದು ಅಂತಿಮ ಎಂದು ಅಧಿಕಾರಿಗಳು ಪತ್ರಕರ್ತರಿಗೆ ತಿಳಿಸಿದರು.

ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಇತರ ದೇಶ ವಿರೋಧಿ ಶಕ್ತಿಗಳೊಂದಿಗೆ ಕಾಂಗ್ರೆಸ್ ಸಂಬಂಧ ಹೊಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸೋಮವಾರ ಆರೋಪಿಸಿದ್ದಾರೆ. ನ್ಯೂಸ್ ಪೋರ್ಟಲ್‌ನ ಹಣದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಬಿಜೆಪಿ ನಾಯಕ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com