ಜ್ಞಾನವಾಪಿಯಲ್ಲಿನ ಸಮೀಕ್ಷೆಯ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ಕೋರ್ಟ್ ನಿರ್ಬಂಧ

ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಯುತ್ತಿರುವ ಸಮೀಕ್ಷೆ ಕುರಿತು ಸ್ಥಳದಿಂದ ವರದಿ ಮಾಡದಂತೆ ವಾರಣಾಸಿ ಕೋರ್ಟ್ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ.
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ

ನವದೆಹಲಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಯುತ್ತಿರುವ ಸಮೀಕ್ಷೆ ಕುರಿತು ಸ್ಥಳದಿಂದ ವರದಿ ಮಾಡದಂತೆ ವಾರಣಾಸಿ ಕೋರ್ಟ್ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ.

ವಾರಣಾಸಿ ನ್ಯಾಯಾಲಯವು ಬುಧವಾರದಂದು ಜ್ಞಾನವಾಪಿ ಕಾಂಪ್ಲೆಕ್ಸ್‌ನ ನಡೆಯುತ್ತಿರುವ ಎಎಸ್‌ಐ ಸಮೀಕ್ಷೆಯನ್ನು ಸ್ಥಳದಿಂದ ವರದಿ ಮಾಡುವುದನ್ನು ಮಾಧ್ಯಮಗಳಿಗೆ ನಿರ್ಬಂಧಿಸಿದ್ದು, ಯಾವುದೇ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡದಂತೆ ಸಮೀಕ್ಷಾ ತಂಡದ ಸದಸ್ಯರಿಗೆ ಸೂಚಿಸಿದೆ. 

17ನೇ ಶತಮಾನದ ಮಸೀದಿಯನ್ನು ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು ನಡೆಸಲಾಗುತ್ತಿರುವ ಸಮೀಕ್ಷೆಯ ಮಾಧ್ಯಮ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಜ್ಞಾನವಾಪಿ ಆಡಳಿತ ಸಮಿತಿಯ ಮನವಿಯ ಮೇರೆಗೆ ಜಿಲ್ಲಾ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರ ನ್ಯಾಯಾಲಯ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಅವರು ಈ ಕುರಿತು ಸುದ್ದಿಸಂಸ್ಥೆ ಪಿಟಿಐಗೆ ಹೇಳಿಕೆ ನೀಡಿದ್ದು, ''ಘಟನೆಯನ್ನು ಸ್ಥಳದಿಂದ ವರದಿ ಮಾಡದಂತೆ ನ್ಯಾಯಾಲಯವು ಮಾಧ್ಯಮಗಳಿಗೆ ಆದೇಶ ನೀಡಿದೆ. ಸಮೀಕ್ಷಾ ತಂಡದ ಸದಸ್ಯರು ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡಬಾರದು. ಶಾಂತಿ ಭಂಗಕ್ಕೆ ಕಾರಣವಾಗುವ ವಿಷಯದ ಕುರಿತು ಇಂತಹ ವರದಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬಾರದು ಎಂದು ನ್ಯಾಯಾಲಯ ಸಲಹೆ ನೀಡಿದೆ.

ಜುಲೈನಲ್ಲಿ ವಾರಣಾಸಿ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡಿತ್ತು. ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಆಗಸ್ಟ್ 4 ರಂದು ಮಸೀದಿ ಸಂಕೀರ್ಣದ ಸರ್ವೆ ಕಾರ್ಯ ಕೂಡ ಆರಂಭವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com