ಪ್ರಿಯಾಂಕಾ ಗಾಂಧಿಗೆ ಎಲ್ಲಾ ಅರ್ಹತೆ ಇದೆ, ಅವರು ಸಂಸತ್ತಿನಲ್ಲಿರಬೇಕು: ರಾಬರ್ಟ್ ವಾದ್ರಾ

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶನಿವಾರ ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿಗೆ ಸಂಸತ್ತಿನಲ್ಲಿ ಇರಲು ಬೇಕಾದ ಎಲ್ಲಾ ಅರ್ಹತೆಗಳಿವೆ ಮತ್ತು ಆಕೆ ಸಂಸತ್ತಿನಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ. 
ಪ್ರಿಯಾಂಕಾ ಗಾಂಧಿ ವಾದ್ರಾ - ರಾಬರ್ಟ್ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ - ರಾಬರ್ಟ್ ವಾದ್ರಾ

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶನಿವಾರ ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿಗೆ ಸಂಸತ್ತಿನಲ್ಲಿ ಇರಲು ಬೇಕಾದ ಎಲ್ಲಾ ಅರ್ಹತೆಗಳಿವೆ ಮತ್ತು ಆಕೆ ಸಂಸತ್ತಿನಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಆಕೆಯ ಲೋಕಸಭೆ ಪ್ರವೇಶಕ್ಕೆ ಕಾಂಗ್ರೆಸ್ ಪಕ್ಷ ಯೋಜನೆ ರೂಪಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

'ಅವರು ಲೋಕಸಭೆಯಲ್ಲಿ ಖಚಿತವಾಗಿ ಇರಬೇಕು. ಆಕೆಗೆ ಎಲ್ಲಾ ಅರ್ಹತೆಗಳಿವೆ. ಅವರು ಸಂಸತ್ತಿನಲ್ಲಿ ಉತ್ತಮ ಸಂಸದೆಯಾಗಿರುತ್ತಾರೆ ಮತ್ತು ಅವರು ಅಲ್ಲಿಗೆ ಅರ್ಹರು. ಕಾಂಗ್ರೆಸ್ ಪಕ್ಷವು ಅವರನ್ನು ಸ್ವೀಕರಿಸುತ್ತದೆ ಮತ್ತು ಅದಕ್ಕಾಗಿ ಉತ್ತಮ ಯೋಜನೆ ರೂಪಿಸುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಸಂಸತ್ತಿನಲ್ಲಿ ಮಾತನಾಡುವಾಗ ಉದ್ಯಮಿ ಗೌತಮ್ ಅದಾನಿಯೊಂದಿಗೆ ತಮ್ಮ ಹೆಸರನ್ನು ಜೋಡಿಸಿದ್ದಕ್ಕಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ವಾದ್ರಾ ವಾಗ್ದಾಳಿ ನಡೆಸಿದರು.

ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ, ಇರಾನಿ ಅವರು ಅದಾನಿ ಜೊತೆಗಿನ ವಾದ್ರಾ ಚಿತ್ರವನ್ನು ಪ್ರದರ್ಶಿಸಿದರು.

ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ. ಆದರೆ, ನನ್ನ ಹೆಸರಿಗಾಗಿ ಹೋರಾಡಲು ನಾನು ಮಾತನಾಡುತ್ತೇನೆ. ಏಕೆಂದರೆ, ಅವರು ನನ್ನ ವಿರುದ್ಧ ಏನಾದರೂ ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.

'ಅವರು ನನ್ನ ಹೆಸರನ್ನು ತೆಗೆದುಕೊಂಡರೆ, ನನ್ನ ಫೋಟೊವನ್ನು ತೋರಿಸಿದರೆ, ದಯವಿಟ್ಟು ನಾನು ಅದಾನಿಯೊಂದಿಗೆ ಏನು ಮಾಡಿದ್ದೇನೆ ಎಂಬುದನ್ನು ನನಗೆ ತೋರಿಸಿ ಎಂದು ನಾನು ಅವರಿಗೆ ಸವಾಲು ಹಾಕುತ್ತೇನೆ. ಮತ್ತು ಯಾವುದೇ ತಪ್ಪಾಗಿದ್ದರೆ ನಾನು ಅದನ್ನು ನಿಭಾಯಿಸುತ್ತೇನೆ ಮತ್ತು ಇಲ್ಲದಿದ್ದರೆ, ಅವರು ಕ್ಷಮೆಯಾಚಿಸಬೇಕು ಮತ್ತು ಅವರ ಹೇಳಿಕೆಯನ್ನು ಹಿಂಪಡೆಯಬೇಕು' ಎಂದು ಅವರು ಹೇಳಿದರು.

ಅದಾನಿಯವರ ವಿಮಾನದಲ್ಲಿ ನಮ್ಮದೇ ಪ್ರಧಾನಿ ಕುಳಿತಿರುವ ಚಿತ್ರ ನಮ್ಮ ಬಳಿ ಇದೆ. ಅದರ ಬಗ್ಗೆ ಮತ್ತು ರಾಹುಲ್ (ಗಾಂಧಿ) ಏನು ಕೇಳುತ್ತಿದ್ದಾರೆಯೋ ಅದರ ಬಗ್ಗೆ ನಾವು ಏಕೆ ಪ್ರಶ್ನೆಗಳನ್ನು ಕೇಳಬಾರದು? ಮತ್ತು ಈ ಪ್ರಶ್ನೆಗಳಿಗೆ ಏಕೆ ಉತ್ತರಿಸಿಲ್ಲ ಎಂದು ಅವರು ಹೇಳಿದರು.

ಮಹಿಳಾ ಕುಸ್ತಿಪಟುಗಳು ತಮ್ಮ ಹಕ್ಕುಗಳಿಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಇರಾನಿ ಅವರು ಅವರನ್ನು ಭೇಟಿ ಮಾಡಲು ಮತ್ತು ಅವರ ಕುಂದುಕೊರತೆಗಳನ್ನು ಕೇಳಲು ಎಂದಿಗೂ ಹೋಗಲಿಲ್ಲ ಎಂದು ವಾದ್ರಾ ಹೇಳಿದರು.

'ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುವುದನ್ನು ನಾನು ಈವರೆಗೆ ನೋಡಿಲ್ಲ. ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ಸಚಿವೆ (ಸ್ಮೃತಿ ಇರಾನಿ) ನನ್ನ ಬಗ್ಗೆ ಕೆಲವು ರೀತಿಯ ನಕಾರಾತ್ಮಕ ವಿಷಯವನ್ನು ಮುನ್ನಲೆಗೆ ತರುತ್ತಿದ್ದಾರೆ. ನಾನು ಸಂಸತ್ತಿನಲ್ಲಿ ಕೂಡ ಇಲ್ಲ' ಎಂದು ಅವರು ಹೇಳಿದರು.

'ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅವರು ಮೂಲೆಗುಂಪಾದಾಗಲೆಲ್ಲಾ ಅವರು ಯಾವಾಗಲೂ ನನ್ನ ವಿರುದ್ಧ ಏನನ್ನಾದರೂ ಮಾತನಾಡುತ್ತಾರೆ ಮತ್ತು ಅವರು ನಿಜವಾದ ಸಮಸ್ಯೆಗಳಿಂದ ಹೊರಬರಲು ಬಯಸುತ್ತಾರೆ. ಆದರೆ, ಅವರು ಎಂದಿಗೂ ನನ್ನ ವಿರುದ್ಧ ಏನನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ' ಎಂದರು.

'ಪ್ರತಿಪಕ್ಷಗಳ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ INDIA ಮೈತ್ರಿಕೂಟಕ್ಕೆ ಸೇರಿದೆ ಮತ್ತು ಅದು ಅವರಿಗೆ (ಬಿಜೆಪಿ ನೇತೃತ್ವದ ಎನ್‌ಡಿಎ) 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡುತ್ತದೆ. INDIA ಎಂಬುದು ಬಹಳ ಒಳ್ಳೆಯ ಶೀರ್ಷಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಭಾರತವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಲಿದ್ದೇವೆ. ಬಿಜೆಪಿ ಸರ್ಕಾರವು ಭಾರತವನ್ನು ನಾಶಮಾಡಿದೆ' ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಮಣಿಪುರಕ್ಕೆ ಏಕೆ ಭೇಟಿ ನೀಡಿಲ್ಲ ಮತ್ತು ಸಂಸತ್ತಿನಲ್ಲಿ ಭಾಷಣ ಮಾಡುವಾಗ ರಾಜ್ಯದ ಬಗ್ಗೆ ಅವಹೇಳನಕಾರಿಯಾಗಿ ಏಕೆ ಮಾತನಾಡಿದ್ದಾರೆ. ಮಣಿಪುರದಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸಲು ಆ ಆಘಾತಕಾರಿ ವಿಡಿಯೋಗಳನ್ನು ಮತ್ತೊಮ್ಮೆ ಪ್ರಧಾನಿಗೆ ಕಳುಹಿಸಬೇಕಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋವನ್ನು ಉಲ್ಲೇಖಿಸಿ ಅವರು ಹೇಳಿದರು.
'ಇದು ಖಂಡಿತವಾಗಿಯೂ ಬಹಳ ಸೂಕ್ಷ್ಮ ವಿಷಯವಾಗಿದೆ. ಮಣಿಪುರದಲ್ಲಿ ಏನಾಗುತ್ತಿದೆ ಎಂಬುದನ್ನು ಸ್ವತಃ ಪ್ರಧಾನ ಮಂತ್ರಿಯೇ ನೋಡಬೇಕು. ಅಲ್ಲಿ ಅವರ ಸರ್ಕಾರವಿದೆ. ಅವರು ಸಮಸ್ಯೆಯನ್ನು ಪರಿಹರಿಸಬೇಕು ಅಥವಾ ಬೇರೆ ಪಕ್ಷವನ್ನು ನಿಭಾಯಿಸಲು ಬಿಡಬೇಕು' ಎಂದು ಅವರು ಹೇಳಿದರು.

ಸಂಸತ್ತಿನಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿರುವ ಕುರಿತು ಮಾತನಾಡಿದ ಅವರು, ಇದು ಆಡಳಿತ ಮಂಡಳಿಯು ಅಧಿಕಾರದ ಸಂಪೂರ್ಣ ದುರುಪಯೋಗವನ್ನು ತೋರಿಸುತ್ತದೆ. ಅವರು (ವಿರೋಧ ಪಕ್ಷದ) ಜನರ ಮೇಲೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸುತ್ತಾರೆ. ಇದೀಗ ಅವರು ಅಮಾನತುಗೊಳಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com