ಕಾವೇರಿ ವಿವಾದ: 24,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಮೊರೆ!

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಬೆಳೆದು ನಿಂತಿರುವ ಬೆಳೆಗಾಗಿ ಇಂದಿನಿಂದ  24, 000 ಕ್ಯೂಸೆಕ್ಸ್ ನೀರನ್ನು ತನ್ನ ಜಲಾಶಯಗಳಿಂದ ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. 
ಕಾವೇರಿ ನದಿ
ಕಾವೇರಿ ನದಿ

ನವದೆಹಲಿ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಬೆಳೆದು ನಿಂತಿರುವ ಬೆಳೆಗಾಗಿ ಇಂದಿನಿಂದ 24, 000 ಕ್ಯೂಸೆಕ್ಸ್ ನೀರನ್ನು ತನ್ನ ಜಲಾಶಯಗಳಿಂದ ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. 

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇದೇ ತಿಂಗಳ 11 ರಂದು ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಮುಂದಿನ 15 ದಿನಗಳವರೆಗೂ ಪ್ರತಿದಿನ 0.864 ಟಿಎಂಸಿ ಅಂದರೆ 15,000 ಕ್ಯೂಸೆಕ್ಸ್  ನಿಂದ 10, 000 ಕ್ಯೂಸೆಕ್ಸ್ ನಷ್ಟು ನೀರನ್ನು ಕರ್ನಾಟಕ ಬಿಳಿಗುಂಡ್ಲುವಿಗೆ  ಹರಿಸಬೇಕೆಂದು ಸೂಚಿಸಿತ್ತು. ಆದರೆ, ಕರ್ನಾಟಕ ಸರ್ಕಾರ ಅದನ್ನೂ ಕೂಡಾ ಅನುಸರಿಸಿಲ್ಲ ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ವಾದಿಸಿದೆ. 

ಬಿಳಿಗುಂಡ್ಲುವಿನಲ್ಲಿ ಇದೇ ತಿಂಗಳ 11, 13, ಮತ್ತು 14 ರಂದು ಕ್ರಮವಾಗಿ 6,148, 4,453 ಮತ್ತು 4,000 ಕ್ಯೂಸೆಕ್ಸ್ ನಷ್ಟು ನೀರಿ ಹರಿದಿದೆ. ಕರ್ನಾಟಕದಿಂದ ನೀರು ಪಡೆಯಲು ತಮಿಳುನಾಡು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು,  ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ನೀರು ಬಿಡಲು ಕರ್ನಾಟಕ ಬದ್ಧವಾಗಿರಬೇಕು ಎಂದು ಹೇಳಲಾಗಿದೆ. 

14.913 ಲಕ್ಷ ಎಕರೆ ನೀರಾವರಿಗಾಗಿ ಮೆಟ್ಟೂರು ಜಲಾಶಯದ ಮೇಲೆ ಅವಲಂಬಿತವಾಗಿದೆ. ಇದು ಬಿಳಿಗುಂಡ್ಲುವಿನಲ್ಲಿ ಹರಿದ ಹರಿವಿನ ಮೇಲೆ ಅವಲಂಬಿತವಾಗಿದ್ದು, ನೈರುತ್ಯ ಮುಂಗಾರು ಅವಧಿಯಲ್ಲಿ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಂದ ಕರ್ನಾಟಕ ಬಿಡುಗಡೆ ಮಾಡುವ ನೀರಿನ ಹರಿವಿನ ಆಧಾರದ ಮೇಲೆ ಒಳಹರಿವು ಇರಲಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಕುರುವಾಯಿ ಮತ್ತು ಸಾಂಬಾ ಎರಡೂ ಬೆಳೆಗಳನ್ನು ಬಿತ್ತಲಾಗುತ್ತದೆ ಮತ್ತು ನಾಟಿ ಮಾಡಲಾಗುತ್ತದೆ. ಹಾಗಾಗಿ ನೈಋತ್ಯ ಮಾನ್ಸೂನ್ ಸಮಯದಲ್ಲಿ ಮೆಟ್ಟೂರಿನಿಂದ ನೀರು ಬಿಡುವುದು ನಿರ್ಣಾಯಕವಾಗಿದೆ ಎಂದು ತಮಿಳುನಾಡು ಹೇಳಿದೆ. 

ಸುಮಾರು 4 ಮಿಲಿಯನ್ ರೈತರು ಮತ್ತು ಸುಮಾರು 10 ಮಿಲಿಯನ್ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಮೆಟ್ಟೂರು ನೀರನ್ನು ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬಿಸಿದ್ದಾರೆ. ಕಾವೇರಿ ನದಿ ಮುಖಜ ಭೂಮಿಯಲ್ಲಿನ ಕೃಷಿ ಚಟುವಟಿಕೆಗಳು  ನೀರಿಲ್ಲದೆ ಬಳಲುತ್ತಿದ್ದು, ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 16, 2018 ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕರ್ನಾಟಕ ಸರ್ಕಾರ ಮಾಸಿಕ ವೇಳಾಪಟ್ಟಿಯಂತೆ ಗೊತ್ತುಪಡಿಸಿದ ಹಂತದಲ್ಲಿ ಕಾವೇರಿ ನೀರನ್ನು ನೀಡುವಂತೆ ನಿರ್ದೇಶಿಸಬೇಕೆಂದು ತಮಿಳುನಾಡು ಸರ್ಕಾರ ಕೋರಿದೆ. 

ಪ್ರಸಕ್ತ ನೀರಾವರಿ ವರ್ಷದಲ್ಲಿ 28.849 ಟಿಎಂಸಿ ನೀರಿನ ಕೊರತೆ ಸರಿದೂಗಿಸಲು ಮತ್ತು ಸೆಪ್ಟೆಂಬರ್‌ಗೆ ನಿಗದಿತ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಎಂಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದೆ. ಕರ್ನಾಟಕಕ್ಕೆ ನೀಡಲಾದ ನಿರ್ದೇಶನಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಸಕ್ತ ನೀರಿನ ವರ್ಷದ ಉಳಿದ ಅವಧಿಯಲ್ಲಿಯೂ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕೆಂದು ತಮಿಳುನಾಡು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com