ಭಾರತ- ಚೀನಾ ಮಿಲಿಟರಿ ಮಾತುಕತೆ: ಲಡಾಖ್ ನಲ್ಲಿ ಇತ್ಯರ್ಥವಾಗದ ಸಮಸ್ಯೆಗಳ ತ್ವರಿತ ಪರಿಹಾರ ಕುರಿತು ಚರ್ಚೆ

ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಎರಡು ದಿನಗಳ ಮಿಲಿಟರಿ ಮಾತುಕತೆ ಮುಕ್ತಾಯವಾದ ನಂತರ ಉಭಯ ದೇಶಗಳು ಜಂಟಿ ಹೇಳಿಕೆಯಲ್ಲಿ ಈ ರೀತಿ ತಿಳಿಸಿವೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಎರಡು ದಿನಗಳ ಮಿಲಿಟರಿ ಮಾತುಕತೆ ಮುಕ್ತಾಯವಾದ ನಂತರ ಉಭಯ ದೇಶಗಳು ಜಂಟಿ ಹೇಳಿಕೆಯಲ್ಲಿ ಈ ರೀತಿ ತಿಳಿಸಿವೆ.  

ಪಾಶ್ಚಿಮಾತ್ಯ ವಲಯದ ಎಲ್ ಎಸಿಯುದ್ದಕ್ಕೂ ಇತ್ಯರ್ಥವಾಗದ ಸಮಸ್ಯೆಗಳ ಪರಿಹಾರದ ಕುರಿತು ಉಭಯ ದೇಶಗಳು ಧನಾತ್ಮಕ, ರಚನಾತ್ಮಕ ಮತ್ತು ಆಳವಾದ ಚರ್ಚೆಯನ್ನು ನಡೆಸಿರುವುದಾಗಿ ಮಾಹಿತಿ ನೀಡಿವೆ. ನಾಯಕತ್ವವು ಒದಗಿಸಿದ ಮಾರ್ಗದರ್ಶನಕ್ಕೆ ಅನುಗುಣವಾಗಿ ಮುಕ್ತ ರೀತಿಯಲ್ಲಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 19 ನೇ ಸುತ್ತಿನ ಸಭೆಯು ಆಗಸ್ಟ್ 13-14 ರಂದು ಭಾರತ ಗಡಿಯ ಚುಶುಲ್-ಮೊಲ್ಡೊ ನಲ್ಲಿ  ನಡೆದಿದೆ. ದೀರ್ಘಾವಧಿಯ ಗಡಿರೇಖೆ ಕುರಿತು ಇದೇ ಮೊದಲ ಬಾರಿಗೆ ಎರಡು ದಿನಗಳ  ಉನ್ನತ ಮಟ್ಟದ ಮಿಲಿಟರಿ ಮಾತುಕತೆ ಆಗಿದ್ದು, 'ಉಳಿದಿರುವ ಸಮಸ್ಯೆಗಳನ್ನು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಉಭಯ ರಾಷ್ಟ್ರಗಳು ಹಲವಾರು ಪ್ರದೇಶಗಳಿಂದ ತಮ್ಮ ಸೇನೆಯನ್ನು ಹಿಂತೆಗೆದುಕೊಂಡಿದ್ದರೂ ಪೂರ್ವ ಲಡಾಖ್‌ನ  ಕೆಲವು ಘರ್ಷಣೆಯ ಬಿಂದುಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಮೂರು ವರ್ಷಗಳ ಘರ್ಷಣೆಯಲ್ಲಿ ಸಿಲುಕಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com