77ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ, ದೇಶವನ್ನುದ್ದೇಶಿಸಿ ಸುದೀರ್ಘ ಭಾಷಣ

ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್‌ಘಾಟ್‌ಗೆ ತೆರಳಿ ಮೋದಿ ನಮನ ಸಲ್ಲಿಸಿದರು. 

ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದ ನಂತರ ಐಎಎಫ್ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು. 

ಪ್ರಧಾನಿ ಮೋದಿ ಭಾಷಣ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ದೇಶ ಭಾರತ. ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದರು. 

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ ಎಲ್ಲಾ ಕೆಚ್ಚೆದೆಯ ಹೃದಯಗಳಿಗೆ ನಾನು ಗೌರವವನ್ನು ಸಲ್ಲಿಸುತ್ತೇನೆ ಎಂದ ಅವರು, ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂದು ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮನವಿ ಮಾಡಿದರು. 

'ದೇಶವು ಮಣಿಪುರದ ಜನರೊಂದಿಗೆ ನಿಂತಿದೆ... ಶಾಂತಿಯಿಂದ ಮಾತ್ರ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಿಹಾರ ಕಂಡುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ' ಎಂದರು.

ಈ ಬಾರಿ, ನೈಸರ್ಗಿಕ ವಿಕೋಪವು ದೇಶದ ಹಲವಾರು ಭಾಗಗಳಲ್ಲಿ ಊಹಿಸಲಾಗದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಇದದಿಂದ ಸಂಕಷ್ಟಕ್ಕೀಡಾದ ಎಲ್ಲಾ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇಂದು ನಾವು ಅಪಾರ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ್ದೇವೆ. ಈ ಮೂರೂ ಒಟ್ಟಾದರೆ ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.

ನಾನು ಕಳೆದ 1000 ವರ್ಷಗಳ ಬಗ್ಗೆ ಮಾತನಾಡುತ್ತಿದ್ದೇನೆ. ಏಕೆಂದರೆ, ದೇಶದ ಮುಂದೆ ಮತ್ತೊಮ್ಮೆ ಅವಕಾಶವಿದೆ ಎಂದು ನಾನು ನೋಡುತ್ತೇನೆ. ಈ ಯುಗದಲ್ಲಿ ನಾವು ಏನು ಮಾಡುತ್ತೇವೆ, ಒಂದರ ನಂತರ ಒಂದರಂತೆ ನಾವು ತೆಗೆದುಕೊಳ್ಳುವ ಕ್ರಮಗಳು ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ 1000 ವರ್ಷಗಳಲ್ಲಿ ದೇಶದ ಸುವರ್ಣ ಇತಿಹಾಸವನ್ನು ರೂಪಿಸುತ್ತವೆ ಎಂದರು.

ದೇಶದಲ್ಲಿ ಅವಕಾಶಗಳ ಕೊರತೆ ಇಲ್ಲ. ದೇಶಕ್ಕೆ ಅಂತ್ಯವಿಲ್ಲದ ಅವಕಾಶಗಳನ್ನು ಒದಗಿಸುವ ಸಾಮರ್ಥ್ಯವಿದೆ. ಭಾರತದ ಉದಯ ಮತ್ತು ಅಭಿವೃದ್ಧಿಯು ದೇಶದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವಾಸಕ್ಕೆ ಕಾರಣವಾಗಿದೆ. ಜಗತ್ತು ತಂತ್ರಜ್ಞಾನ ಚಾಲಿತವಾಗಿದೆ. ತಂತ್ರಜ್ಞಾನದಲ್ಲಿನ ತನ್ನ ಪ್ರತಿಭೆಯೊಂದಿಗೆ ಭಾರತವು ಜಾಗತಿಕ ವೇದಿಕೆಯಲ್ಲಿ ಹೊಸ ಪಾತ್ರ ಮತ್ತು ಪ್ರಭಾವವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.

ಯುವಜನರ ಕೊಡುಗೆಯನ್ನು ಶ್ಲಾಷಿಸಿದ ಪ್ರಧಾನಿ ಮೋದಿ, ಹಂತ 2, ಹಂತ 3ನೇ ನಗರದ ಜನರು ಸಹ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿದ್ದಾರೆ. ಭಾರತ ಈಗ ಯಾವ ಕ್ಷೇತ್ರದಲ್ಲಿ ಹಿಂದುಳಿಯುವುದಿಲ್ಲ ಎಂದು ಜಾಗತಿಕ ತಜ್ಞರೇ ಹೇಳಿದ್ದಾರೆ. ಎಲ್ಲಾ ರೇಟಿಂಗ್ ಏಜೆನ್ಸಿಗಳು ದೇಶವನ್ನು ಶ್ಲಾಘಿಸುತ್ತಿವೆ. ಭಾರತದ ಅತ್ಯಂತ ದೊಡ್ಡ ಸಾಮರ್ಥ್ಯವೆಂದರೆ ನಂಬಿಕೆ. ಸರ್ಕಾರದಲ್ಲಿ ಜನರ ನಂಬಿಕೆ, ದೇಶದ ಉಜ್ವಲ ಭವಿಷ್ಯದಲ್ಲಿ ಮತ್ತು ಭಾರತದ ಮೇಲೆ ವಿಶ್ವದ ನಂಬಿಕೆಯೇ ದೊಡ್ಡದು ಎಂದು ತಿಳಿಸಿದರು.

ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನಾಗರಿಕರನ್ನು ಉದ್ದೇಶಿಸಿ 'ಪರಿವಾರಜನ್' (ಕುಟುಂಬದ ಸದಸ್ಯರು) ಎಂಬ ಪದವನ್ನು ಪದೇ ಪದೆ ಬಳಸಿದರು. ಬದಲಾಗುತ್ತಿರುವ ಜಗತ್ತನ್ನು ರೂಪಿಸುವಲ್ಲಿ, ಭಾರತದ ಜನರ ಸಾಮರ್ಥ್ಯಗಳು ಸ್ಪಷ್ಟವಾಗಿವೆ. ನಮ್ಮ ಕಡೆಯಲ್ಲಿರುವ ಚೆಂಡು ಮತ್ತು ಅವಕಾಶವನ್ನು ನಾವು ಬಿಡಬಾರದು. ಭಾರತದ ಸಾಮರ್ಥ್ಯಗಳ ಬಗ್ಗೆ ಯಾರ ಮನಸ್ಸಿನಲ್ಲಿಯೂ ಅಪನಂಬಿಕೆ ಇಲ್ಲ ಎಂದರು.  

ಮಹಾಯುದ್ಧದ ನಂತರ ಹೊಸ ವಿಶ್ವವು ಹೊರಹೊಮ್ಮಿದಂತೆಯೇ, ಕೋವಿಡ್-19 ಸಾಂಕ್ರಾಮಿಕದ ನಂತರವೂ ಹೊಸ ವಿಶ್ವ ರೂಪುಗೊಳ್ಳುವುದನ್ನು ನಾನು ನೋಡುತ್ತಿದ್ದೇನೆ. ಕೋವಿಡ್ ನಂತರ, ಹೊಸ ವಿಶ್ವ ಕ್ರಮಾಂಕ, ಹೊಸ ಭೌಗೋಳಿಕ-ರಾಜಕೀಯ ಸಮೀಕರಣವು ರೂಪುಗೊಳ್ಳುತ್ತಿದೆ. ಭೌಗೋಳಿಕ ರಾಜಕೀಯದ ವ್ಯಾಖ್ಯಾನವು ಬದಲಾಗುತ್ತಿದೆ. ಇಂದು, 140 ಕೋಟಿ ಜನರ ಸಾಮರ್ಥ್ಯವು ಹೊಸ ವಿಶ್ವ ಕ್ರಮವನ್ನು ರೂಪಿಸುವಲ್ಲಿ ಕಾಣಬಹುದು ಎಂದು ಮೋದಿ ಹೇಳಿದರು.

ಭಾರತದ ಸಾಮರ್ಥ್ಯ ಮತ್ತು ಸಾಧ್ಯತೆಗಳು ನಂಬಿಕೆಯ ಹೊಸ ಉತ್ತುಂಘವನ್ನು ದಾಟಲಿವೆ ಎಂಬುದು ಖಚಿತವಾಗಿದೆ. ಈ ಹೊಸ ನಂಬಿಕೆಯ ಎತ್ತರಗಳು ಹೊಸ ಸಾಮರ್ಥ್ಯಗಳೊಂದಿಗೆ ಮುಂದುವರಿಯುತ್ತವೆ. ಇಂದು ಭಾರತವು G20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ. ಕಳೆದ ವರ್ಷದಲ್ಲಿ, G20 ನ ಹಲವಾರು ಕಾರ್ಯಕ್ರಮಗಳು ಭಾರತದ ಮೂಲೆ ಮೂಲೆಯಲ್ಲಿ ನಡೆದ ರೀತಿಯು ಭಾರತದ ಸಾಮಾನ್ಯ ಜನರ ಸಾಮರ್ಥ್ಯ, ಭಾರತದ ವೈವಿಧ್ಯತೆಯ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ ಎಂದರು.

ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ದೇಶವನ್ನು ಬದಲಾಯಿಸುತ್ತಿವೆ. 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ 10ನೇ ಸ್ಥಾನದಲ್ಲಿದ್ದೆವು. ಇಂದು 140 ಕೋಟಿ ಭಾರತೀಯರ ಶ್ರಮದಿಂದ ಐದನೇ ಸ್ಥಾನಕ್ಕೆ ತಲುಪಿದ್ದೇವೆ. ಇದು ಏಕಾಏಕಿ ಸಾಧ್ಯವಾಗಲಿಲ್ಲ. ದೇಶವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿದ್ದ ಭ್ರಷ್ಟಾಚಾರದ ರಾಕ್ಷಸನನ್ನು ಹೊಡೆದೋಡಿಸಿದ್ದೇವೆ. ನಾವು ಸೋರಿಕೆಯನ್ನು ನಿಲ್ಲಿಸಿದ್ದೇವೆ ಮತ್ತು ಬಲವಾದ ಆರ್ಥಿಕತೆಯನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.

ಸಾಂಪ್ರದಾಯಿಕ ಕೌಶಲ್ಯ ಹೊಂದಿರುವವರಿಗೆ ನೆರವಾಗಲು ಮುಂದಿನ ತಿಂಗಳಲ್ಲಿ 13,000 ರಿಂದ 15,000 ಕೋಟಿ ರೂಪಾಯಿ ವೆಚ್ಛದಲ್ಲಿ 'ವಿಶ್ವಕರ್ಮ ಯೋಜನೆ'ಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.

ಜಗತ್ತು ಇನ್ನೂ ಕೊರೊನಾದಿಂದ ಚೇತರಿಸಿಕೊಂಡಿಲ್ಲ. ಯುದ್ಧವು ಮತ್ತೊಂದು ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಇಂದು ಜಗತ್ತು ಹಣದುಬ್ಬರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಣದುಬ್ಬರವು ಇಡೀ ಜಾಗತಿಕ ಆರ್ಥಿಕತೆಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿದೆ. ಇದು ದುರದೃಷ್ಟಕರ. ನಾವು ನಮ್ಮ ಅಗತ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುವಾಗ, ನಾವು ಹಣದುಬ್ಬರವನ್ನು ಸಹ ಆಮದು ಮಾಡಿಕೊಳ್ಳುತ್ತೇವೆ. ಆದರೆ, ಭಾರತವು ಹಣದುಬ್ಬರವನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ನಮ್ಮ ಪರಿಸ್ಥಿತಿಯು ಪ್ರಪಂಚದ ಉಳಿದ ಭಾಗಗಳಿಗಿಂತ ಉತ್ತಮವಾಗಿದೆ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ. ನಾವು ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಹಣದುಬ್ಬರದ ಹೊರೆಯು ನನ್ನ ದೇಶದ ನಾಗರಿಕರ ಮೇಲೆ ಮತ್ತಷ್ಟು ಪ್ರಭಾವ ಬೀರುವುದನ್ನು ತಡೆಯಲು ನಾವು ಆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com