ಬಿಹಾರ: ಸಮಸ್ತಿಪುರದಲ್ಲಿ ಗೋಕಳ್ಳರನ್ನು ಹಿಡಿಯಲು ಹೋದ SHO ಮುಖಕ್ಕೆ ಗುಂಡಿಕ್ಕಿ ಹತ್ಯೆ
ಬಿಹಾರದಲ್ಲಿ ಅಪರಾಧಿ ಕೃತ್ಯಗಳು ಹೆಚ್ಚಾಗುತ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ಘಟನೆ ವರದಿಯಾಗುತ್ತಿದ್ದು ಈ ಬಾರಿ ಅಪರಾಧಿಗಳ ಕೃತ್ಯ ಮಿತಿ ಮೀರಿದ್ದಾರೆ.
ಸಮಸ್ತಿಪುರ ಜಿಲ್ಲೆಯಲ್ಲಿ ಜಾನುವಾರು ಕಳ್ಳಸಾಗಣೆದಾರರ ವಿರುದ್ಧ ದಾಳಿ ನಡೆಸಲು ತೆರಳಿದ್ದ ಮೋಹನ್‌ಪುರ ಒಪಿ ಎಸ್‌ಎಚ್‌ಒ ನಂದ್ ಕಿಶೋರ್ ಯಾದವ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮಸ್ತಿಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ರಾಜಧಾನಿ ಪಾಟ್ನಾಗೆ ಕರೆದೊಯ್ಯಲಾಯಿತು. ಆದರೆ ಪಾಟ್ನಾದಲ್ಲಿ ಚಿಕಿತ್ಸೆ ವೇಳೆ ನಂದ್ ಕಿಶೋರ್ ಯಾದವ್ ಸಾವನ್ನಪ್ಪಿದ್ದಾರೆ.
ವಾಸ್ತವವಾಗಿ, ಮೋಹನ್‌ಪುರ ಒಪಿ ಠಾಣೆಯ ಜಾನುವಾರು ಕಳ್ಳಸಾಗಣೆ ಮತ್ತು ಲೂಟಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು. ಮಾಹಿತಿ ಆಧರಿಸಿ, ಮೋಹನ್‌ಪುರ ಒಪಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ನಂದ ಕಿಶೋರ್ ಯಾದವ್ ತಮ್ಮ ತಂಡದೊಂದಿಗೆ ದಾಳಿ ನಡೆಸಿದರು. ಶಹವಾಜ್‌ಪುರ ಬೈಪಾಸ್ ರಸ್ತೆ ಬಳಿ ಜಾನುವಾರು ಕಳ್ಳಸಾಗಣೆದಾರರು ಪಿಕಪ್ ವ್ಯಾನ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ ನಂದ ಕಿಶೋರ್ ಯಾದವ್ ಬೆನ್ನಟ್ಟಿದ್ದರು. ಅಷ್ಟರಲ್ಲಿ ಗೋಕಳ್ಳಸಾಗಣೆದಾರರು ಗುಂಡಿನ ದಾಳಿ ಆರಂಭಿಸಿದರು. ಪೊಲೀಸರೂ ಪ್ರತಿದಾಳಿ ನಡೆಸಿದರು. ಗುಂಡಿನ ದಾಳಿಯ ವೇಳೆಯೇ ಜಾನುವಾರು ಕಳ್ಳಸಾಗಣೆದಾರರ ಕಡೆಯಿಂದ ಹಾರಿದ ಗುಂಡು ನಂದ ಕಿಶೋರ್ ಯಾದವ್ ಅವರ ಕಣ್ಣಿಗೆ ತಗುಲಿತ್ತು.
ಮಾಹಿತಿ ಪಡೆದ ಸಮಸ್ತಿಪುರ ಎಸ್ಪಿ ವಿನಯ್ ತಿವಾರಿ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಹನ್‌ಪುರ ಒಪಿ ಪ್ರದೇಶದಲ್ಲಿ ಜಾನುವಾರು ಕಳ್ಳತನದ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಎಸ್‌ಪಿ ವಿನಯ್ ತಿವಾರಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ನಳಂದಾದಲ್ಲಿ ಗ್ಯಾಂಗ್ ವೊಂದು ಸಿಕ್ಕಿಬಿದ್ದಿತ್ತು. ಮೋಹನ್‌ಪುರ ಒಪಿ ಪೊಲೀಸರು ಈ ತಂಡದ ಮೇಲೆ ದಾಳಿ ನಡೆಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ