
ನವದೆಹಲಿ: ವರ್ಷಾಂತ್ಯದಲ್ಲಿ ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಗೆ ಸಿದ್ಧತೆ, ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ BJP ಚುನಾವಣೆ ಸಮಿತಿ ಸಭೆ ನಡೆಯಲಿದೆ.
ಐದು ರಾಜ್ಯಗಳ ಮುಂಬರುವ ವಿಧಾನಸಭೆ ಚುನಾವಣೆಯ ಬಗ್ಗೆ ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಹಿತ ಹಿರಿಯ ನಾಯಕರು ಇರುವ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಇಂದು (ಬುಧವಾರ) ಸಂಜೆ ಸಭೆ ಸೇರಲಿದೆ ಎಂದು ಪಕ್ಷದ ನಾಯಕರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, 'ಚುನಾವಣಾ ತಯಾರಿ, ಅಭಿಪ್ರಾಯ ಸಂಗ್ರಹ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿ ಪಕ್ಷದ ಚುನಾವಣಾ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ ಸಿಂಗ್ ಹಾಗೂ ಅಮಿತ್ ಶಾ ಅವರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಚುನಾವಣೆ ಘೋಷಣೆಯಾದ ಬಳಿಕವೇ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರುತ್ತಿತ್ತು. ಆದರೆ 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಪಂಚರಾಜ್ಯಗಳ ಚುನಾವಣೆ ಮಹತ್ವದ್ದಾಗಿದ್ದರಿಂದ ಬೇಗನೇ ಸಭೆ ನಡೆಸಲು ಪಕ್ಷ ತೀರ್ಮಾನಿಸಿದೆ. ಇದು ರಾಜ್ಯ ಚುನಾವಣಾ ಪ್ರಚಾರದ ಮೇಲ್ವಿಚಾರಣೆಯಲ್ಲಿ ಕೇಂದ್ರ ನಾಯಕತ್ವದ ಹೆಚ್ಚಿನ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ ಎಂದು ಮೂಲಗಳು ಗಮನಿಸಿವೆ.
ಸಭೆಯಲ್ಲಿ ಅಭ್ಯರ್ಥಿಗಳ ನಿರ್ಧಾರ ಮತ್ತು ಪ್ರಚಾರ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಕ್ಷವು ಹೆಚ್ಚು ಗಮನ ಹರಿಸಬೇಕಾದ ಸ್ಥಾನಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಪಕ್ಷದ ರಾಜ್ಯ ನಾಯಕತ್ವವು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಸೇರಿದಂತೆ ತಳಮಟ್ಟದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಜನರಿಗೆ ತಲುಪಿಸಲು ಮಾಹಿತಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪಕ್ಷದ ರಾಜ್ಯ ಅಧ್ಯಕ್ಷ ವಿಡಿ ಶರ್ಮಾ ಮತ್ತು ಇತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಈ ವರ್ಷದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿಯೊಂದಿಗೆ ಅಧಿಕಾರದಲ್ಲಿದೆ.
Advertisement