ಬಿಲ್ಕಿಸ್ ಬಾನೊ ಕೇಸ್: ಆಯ್ದ ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದನ್ನು ರಾಜ್ಯ ಸರ್ಕಾರಗಳು ಮಾಡಬಾರದು- ಸುಪ್ರೀಂ ಕೋರ್ಟ್

ರಾಜ್ಯ ಸರಕಾರಗಳು ಅಪರಾಧಿಗಳಿಗೆ  ಕ್ಷಮಾಪಣೆ ನೀಡುವುದನ್ನು ಆಯ್ದುಕೊಳ್ಳಬಾರದು ಮತ್ತು ಸಮಾಜದಲ್ಲಿ ಸುಧಾರಣೆ ಮತ್ತು ಸಮಾಜದೊಂದಿಗೆ ಮರುಸಂಘಟಿಸುವ ಅವಕಾಶವನ್ನು ಪ್ರತಿಯೊಬ್ಬ ಕೈದಿಗಳಿಗೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಜರಾತ್ ಸರಕಾರಕ್ಕೆ ಹೇಳಿದೆ.
ತನ್ನ ಕುಟುಂಬದೊಂದಿಗೆ ಬಿಲ್ಕಿಸ್ ಬಾನೊ
ತನ್ನ ಕುಟುಂಬದೊಂದಿಗೆ ಬಿಲ್ಕಿಸ್ ಬಾನೊ

ನವದೆಹಲಿ: ರಾಜ್ಯ ಸರಕಾರಗಳು ಅಪರಾಧಿಗಳಿಗೆ ಕ್ಷಮಾಪಣೆ ನೀಡುವುದನ್ನು ಆಯ್ದುಕೊಳ್ಳಬಾರದು ಮತ್ತು ಸಮಾಜದಲ್ಲಿ ಸುಧಾರಣೆ ಮತ್ತು ಸಮಾಜದೊಂದಿಗೆ ಮರುಸಂಘಟಿಸುವ ಅವಕಾಶವನ್ನು ಪ್ರತಿಯೊಬ್ಬ ಕೈದಿಗಳಿಗೂ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಗುಜರಾತ್ ಸರಕಾರಕ್ಕೆ ಹೇಳಿದೆ. 2002ರಲ್ಲಿ ಸಂಭವಿಸಿದ ಹಿಂಸಾಚಾರ ಸಂದರ್ಭದಲ್ಲಿ ನಡೆದಿದ್ದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಯ ನಿರ್ಧಾರವನ್ನು ಗುಜರಾತ್ ಸರ್ಕಾರ ಸಮರ್ಥಿಸಿಕೊಂಡಿತ್ತು.

ಗುಜರಾತ್ ಸರ್ಕಾರದ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಠಿಣ ಅಪರಾಧಿಗಳಿಗೂ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಾನೂನು ಹೇಳುತ್ತದೆ. 11 ಅಪರಾಧಿಗಳು ಮಾಡಿದ ಅಪರಾಧವು ಘೋರ ಆದರೆ ಇದು ಅಪರೂಪದ ವರ್ಗದಲ್ಲಿ ಬರುವುದಿಲ್ಲ. ಆದ್ದರಿಂದ ಅವರು ಸುಧಾರಣೆಯ ಅವಕಾಶಕ್ಕೆ ಅರ್ಹರು ಎಂದು ಕಾನೂನು ಅಧಿಕಾರಿ ಹೇಳಿದರು. 

"ಒಬ್ಬ ವ್ಯಕ್ತಿಯು ಅಪರಾಧ ಮಾಡಿರಬಹುದು. ಒಂದು ನಿರ್ದಿಷ್ಟ ಕ್ಷಣದಲ್ಲಿ ಏನಾದರೂ ತಪ್ಪಾಗಿರಬಹುದು. ನಂತರ, ಅವನು ಯಾವಾಗಲೂ ಪರಿಣಾಮಗಳನ್ನು ಅರಿತುಕೊಳ್ಳಬಹುದು. ಇದು ಹೆಚ್ಚಾಗಿ ಜೈಲಿನಲ್ಲಿ ಅವರ ನಡವಳಿಕೆಯಿಂದ ನಿರ್ಧರಿಸಲ್ಪಡುತ್ತದೆ, ಪೆರೋಲ್ ಅಥವಾ ಧೀರ್ಘಾವಧಿಗೆ ಬಿಡುಗಡೆಯಾದಾಗ ಇವೆಲ್ಲವೂ ತಾವು ಮಾಡಿದ್ದು ತಪ್ಪು ಎಂದು ಅವರು ಅರಿತುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಕಾನೂನು ಎಲ್ಲರಿಗೂ ಶಾಶ್ವತವಾಗಿ ಶಿಕ್ಷೆ ವಿಧಿಸಬಾರದು. ಸುಧಾರಣೆಗೆ ಅವಕಾಶ ನೀಡಬೇಕು ರಾಜು ಹೇಳಿದರು.

ರಾಜು ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಜೈಲಿನಲ್ಲಿರುವ ಇತರ ಕೈದಿಗಳಿಗೆ ಕಾನೂನು ಎಷ್ಟು ಅನ್ವಯಿಸುತ್ತದೆ ಎಂಬುದನ್ನು ತಿಳಿಯಲು ಬಯಸಿತು. ನಮ್ಮ ಜೈಲುಗಳು ಏಕೆ ಕಿಕ್ಕಿರಿದು ತುಂಬಿವೆ? ವಿನಾಯಿತಿ ನೀತಿಯನ್ನು ಏಕೆ ಆಯ್ದುಕೊಳ್ಳಲಾಗುತ್ತಿದೆ? ಸುಧಾರಣೆಯ ಅವಕಾಶವನ್ನು ಕೆಲವು ಕೈದಿಗಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬ ಕೈದಿಗಳಿಗೂ ನೀಡಬೇಕು. ಅಪರಾಧಿಗಳು 14 ವರ್ಷಗಳನ್ನು ಪೂರೈಸಿರುವಲ್ಲಿ ವಿನಾಯಿತಿ ನೀತಿಯನ್ನು ಎಲ್ಲಿಯವರೆಗೆ ಜಾರಿಗೊಳಿಸಲಾಗುತ್ತಿದೆ. ಎಲ್ಲ ಪ್ರಕರಣಗಳಲ್ಲೂ ಇದನ್ನು ಅನ್ವಯಿಸಲಾಗುತ್ತಿದೆಯೇ?’’ ಎಂದು ಪೀಠ ರಾಜು ಅವರನ್ನು ಪ್ರಶ್ನಿಸಿತು. ಪ್ರಕರಣದ ವಿಚಾರಣೆ ಆಗಸ್ಟ್ 24 ರಂದು ಪುನರಾರಂಭವಾಗಲಿದೆ.

ಇದಕ್ಕೂ ಮುನ್ನಾ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದಿರುವುದು ಮಾನವೀಯತೆಯ ವಿರುದ್ಧದ ಅಪರಾಧ" ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಅಲ್ಲದೇ ಭಯಾನಕ  ಪ್ರಕರಣದಲ್ಲಿ ಭಾಗಿಯಾದ  11 ಅಪರಾಧಿಗಳಿಗೆ ವಿನಾಯಿತಿ ನೀಡುವ ಮೂಲಕ ಗುಜರಾತ್ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಆದೇಶವನ್ನು ಚಲಾಯಿಸಲು ವಿಫಲವಾಗಿದೆ ಎಂದು ಆರೋಪಿಸಿದರು. 

ಆರೋಪಿಗಳಿಗೆ ವಿನಾಯಿತಿ ನೀಡಿರುವುದನ್ನು ವಿರೋಧಿಸಿ ಬಿಲ್ಕಿಸ್ ಬಾನೊ  ಸಲ್ಲಿಸಿರುವ ಅರ್ಜಿಯ ಜೊತೆಗೆ, ಮಹುವಾ ಮೊಯಿತ್ರಾ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಮತ್ತು ಲಕ್ನೋ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸೇರಿದಂತೆ ಹಲವು ಮಂದಿ ಕ್ಷಮದಾನ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮುಗಲಭೆಗಳ ಭೀಕರತೆಯಿಂದ ಪಲಾಯನ ಮಾಡುವಾಗ ಬಿಲ್ಕಿಸ್ ಬಾನೋ 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿಯಾಗಿದ್ದಳು. ಗಲಭೆಯಲ್ಲಿ ಸಾವನ್ನಪ್ಪಿದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com