ಹಿಮಾಚಲ ಪ್ರದೇಶ: ಭಾರಿ ಮಳೆಯಿಂದಾಗಿ ವ್ಯಾಪಕ ನಷ್ಟ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಪ್ರಯತ್ನ: ಜೆಪಿ ನಡ್ಡಾ

ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶ ತತ್ತರಿಸಿದ್ದು, ಭಾರಿ ನಷ್ಟ ಉಂಟಾಗಿದೆ ಮತ್ತು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ.
ಜೆಪಿ ನಡ್ಡಾ
ಜೆಪಿ ನಡ್ಡಾ

ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶ ತತ್ತರಿಸಿದ್ದು, ಭಾರಿ ನಷ್ಟ ಉಂಟಾಗಿದೆ ಮತ್ತು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ.

ಪರಿಸ್ಥಿತಿಯನ್ನು ಅವಲೋಕಿಸಲು ನಡ್ಡಾ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಬಿಂದಾಲ್ ಅವರೊಂದಿಗೆ ರಾಜ್ಯ ಪ್ರವಾಸದಲ್ಲಿದ್ದಾರೆ.

ಸಿರ್ಮೌರ್‌ನ ಪೌಂಟಾ ಸಾಹಿಬ್‌ನಿಂದ ರಾಜ್ಯದ ಪ್ರವಾಹ ಮತ್ತು ಮಳೆ ಪೀಡಿತ ಪ್ರದೇಶಗಳ ಭೇಟಿಯನ್ನು ಪ್ರಾರಂಭಿಸಿದ ನಡ್ಡಾ, ಮಳೆಯಿಂದ ಉಂಟಾದ ಅವಘಡಗಳಿಂದಾದ ಸಾವು ಮತ್ತು ಇತರೆ ನಷ್ಟವನ್ನು ನೋಡಲು ನನಗೆ ನೋವಾಗಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದು ಹೇಳಿದರು. ಇದೇ ವೇಳೆ, ಆಗಸ್ಟ್ 10ರಂದು ಹಠಾತ್ ಪ್ರವಾಹದಲ್ಲಿ ಐವರನ್ನು ಕಳೆದುಕೊಂಡಿದ್ದ ಕುಟುಂಬವನ್ನು ಭೇಟಿಯಾದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಮಾಚಲ ಪ್ರದೇಶವು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಕೇಂದ್ರ ಸರ್ಕಾರವು ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸಿದೆ. ಪರಿಹಾರ ಒದಗಿಸಲು ಮತ್ತು ಪುನಃಸ್ಥಾಪನೆ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಆಡಳಿತದಿಂದ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರದ ಸಹಾಯವು ಮುಂದುವರಿಯುತ್ತದೆ ಮತ್ತು ಎಲ್ಲಾ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು.

ನಂತರ, ಆಗಸ್ಟ್ 14ರಂದು ಭಾರಿ ಭೂಕುಸಿತದಿಂದಾಗಿ ಹಾನಿಗೊಳಗಾದ ಸಮ್ಮರ್ ಹಿಲ್‌ನಲ್ಲಿರುವ ಶಿವನ ದೇವಾಲಯ ಪ್ರದೇಶ ಮತ್ತು ಕೃಷ್ಣಾನಗರಕ್ಕೆ ನಡ್ಡಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.

ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾದಾಗಿನಿಂದ, ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 338 ಜನರು ಸಾವಿಗೀಡಾಗಿದ್ದಾರೆ ಮತ್ತು 38 ಜನರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

338 ಸಾವುಗಳಲ್ಲಿ 221 ಜನರು ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಅದು ಹೇಳಿದೆ.

ಭಾರಿ ಮಳೆಯಿಂದ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ, ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯವನ್ನು 'ನೈಸರ್ಗಿಕ ವಿಕೋಪ ಪೀಡಿತ ಪ್ರದೇಶ' ಎಂದು ಘೋಷಿಸಿದೆ. 

ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com